ಬಿಳಿ ಕೊರಳ ಹದ್ದು
ಮನೆ ಮೇಲೆ ಹಾರುತ್ತಿತ್ತು
ಅಜ್ಜಿ ಹೇಳಿದಳು ಮಗಾ,
ಗರುಡ ಬಂದ ಕೈಯ ಮುಗಿ
ಭಕ್ತಿ ಭಾವದೀ
ಕರವ ಮುಗಿದೆ,
ದೇವದೇವನ
ವಾಹನವೆಂದು.
ದಿಟ್ಟಿಸಿದೆನದನ,
ನೋಡಲಿಲ್ಲವದು ನನ್ನ
ನೆಟ್ಟಿತ್ತದರ ಮನ ಹಿತ್ತಿಲ
ಮರದ ಗುಬ್ಬಿ ಗೂಡಿನಲ್ಲಿ
ಕ್ಷಣದಿಂದೆ ಸೃಷ್ಟಿ ಪಡೆದ
ಮರಿಗುಬ್ಬಿಗಳೆಡೆಯ ದೃಷ್ಟಿ
ಭಕ್ತನಾ ಮರೆಸಿತದಕೆ
ಅಪ್ಪಳಿಸಿತಾ ಗುಬ್ಬಿಗೂಡಿಗೆ
ಹರಿತ ನಖಗಳಿಗೆ ಸಿಲುಕಿ
ನಲುಗಿದವಾ ಮರಿ ಗುಬ್ಬಿಗಳು
ಕೊರಳ ಸೀಳಿ, ಕರುಳ ಬಗೆದವು
ದೇವ ದೂತನ ಪಂಜಗಳು
ಸುರಿದ ರಕ್ತ..
ನೆಲ ಬೀಳುವಷ್ಟರಲ್ಲಿ ಮಾಯ
ನಡೆದ ಹಿಂಸೆಯ
ಕುರುಹು ಸಿಗದ ಹಾಗೆ.
ಅಜ್ಜಿ ಹೇಳುತ್ತಲೇ ಇದ್ದಾಳೆ
ಮಗಾ ಗರುಡ ಬಂದ ಕೈಯ ಮುಗಿ