ನಿಮ್ಮ ಮನೆಗೆ ಬಂದ ನೆಂಟರಯ್ಯಾ ನಾವು
ನಿಮ್ಮ ಮನದಲಿ ನೆಲೆಯ ಅರಸಿ ಬಂದಿಹೆವು
ನಿಮಗಿಷ್ಟವಿರುವವರೆಗೆ ನಿಮ್ಮ ಮನೆಯಲಿ ತಾಣ
ನೀವಟ್ಟಿದಾ ಒಡನೆ ಹೊರಡುತಿಹೆವು
ನಿವಾಸಿಕರ ಮನೆಗಿಂದು ಪ್ರವಾಸಿಗರು ಬಂದಿಹೆವು
ಗುರುಕರುಣೆಯಾ ಕೋರಿ ಅಂತೆವಾಸಿಗಳು
ಬೇಡ ಕಲ್ಲಿಟ್ಟಿಗೆ ಗೋಡೆ ಬೇಡ ಕದವಗುಳಿಯ ಗೊಡವೆ
ಇರಲಿ ನವ ಕಿಟಕಿಗಳು ಬೆಳಕ ತರಲು
ಬೇಕಿಲ್ಲ ಮೃಷ್ಟಾನ್ನ ಬೇಡ ಭೂರಿ ಭೋಜನವು
ಅರಿವು ನೀಡಿರಿ ಸಾಕು ಅಳಿಯೇ ಜ್ಞಾನದ ಹಸಿವು
ಮುಜುಗರದ ಜೀವನದಿ ಅಜಗರನ ನೆರಳಿಹುದು
ನರಳಿಕೆಯ ದೇಹ ತೊರೆದರಳಲಿ ಮನವು
ಸತ್ಕಾರವು ಬೇಡೆಮೆಗೆ ಸಾಕ್ಷಾತ್ಕಾರವು ಬೇಕು
ಪರಮ ಸತ್ಯವ ತಿಳಿಯೆ ಸಾಕ್ಷಿಭೂತರು ನಾವು
ನೀವೆಮೆಗೆ ವಾಹನವು ಮುಗಿವ ಮನ್ನವಿಂಧನವು
ಪಡೆಯಿರಾತ್ಮನಾ ಸೇರಿ ಪರಮಾತ್ಮನಾ ಒಲವು.