ನಿಲ್ಲಲಾರೆಯ ಮನದ ನೆಲದಲಿ,
ನೀಲಮೇಘ ಶ್ಯಾಮ,
ನಿನ್ನ ಲೀಲಾ ವಿಲಾಸ ತೋರಲಿ,
ನೀಲ ಕಂಗಳ ಮರ್ಮ.
ಕಡಲ ಒಡಲು ನೀಲಿ, ಮುಗಿಲ ಬಗಲು ನೀಲಿ
ಶಾಮ ನೀಲಿ, ರಾಮ ನೀಲಿ
ದೂರ ಗಿರಿಯು ನೀಲಿ, ನಿನ್ನ ಗರಿಯು ನೀಲಿ
ಭಾಮ ನೀಲಿ, ನಿನ್ನ ಕಾಮ ನೀಲಿ.
ಕನಲಿದ ಚಿತ್ತದ ಮತ್ತಿನ ನೀಲಿ
ಮಲಿನ ಮನಸಿನ ಭಿತ್ತಿಯ ನೀಲಿ
ನನ್ನಲಿ, ನಿನ್ನಲಿ ಆವರಿಸಿಹ ನೀಲಿ
ತೇಲಲಿ ನಲಿಯಲಿ ಮುತ್ತಿನರಿವಿನಲಿ
ಏಕೆ ಬಂದೆ ಇಲ್ಲಿ ನೀಲಿ
ಮುಗಿದುದೇನು ಹರಿಯ ಪಾಳಿ
ಅಪಾರದ ಪಾರವೂ ನೀಲಿ
ಅನಂತದ ಅಂತ್ಯವೂ ನೀಲಿ
ಬಣ್ಣಬಣ್ಣದ ವರ್ಣನೆಗಲ್ಲವು
ಅವರ್ಣನೀಯನ ಬಣ್ಣನೆಗಲ್ಲವು
ಅಂತರಾತ್ಮನ ಸಾಕ್ಷತ್ಕಾರವು
ಕೇಶವನರಿವಿನ ನೀಲವರ್ಣವು
22-12-2009