ಹೊತ್ತು ಹೊತ್ತಿಗೆ ತುತ್ತೊಂದು ದೊರೆತರೆ
ಮತ್ತ್ಯಾಕೆ ಇಹದ ಚಿಂತೆ
ಹತ್ತೂರ ದೇವರ ಮತ್ತೆ ಗುಡಿಗುಂಡಾರ
ಸುತ್ತಿ ಪರದತ್ತಿರ ನಿಂತೆ
ಹೊಟ್ಟೆಯ ಪಾಡೊಂದು ನೆಟ್ಟಗೆ ಆದರೆ
ಮತ್ಯಾಕೆ ತಟ್ಟೀತು ಚಿಂತೆ
ಉಟ್ಟ ಬಟ್ಟೆಯ ನೆವದಿ, ತೊಟ್ಟಾಭರಣದ ನೆವದಿ
ರಂಗನ ಕಂಡೊರು ಉಂಟೆ
ಕಷ್ಟದ ದಿನಗಳು ತನ್ನಷ್ಟಕ್ಕೆ ತೊಲಗಲು
ಇಷ್ಟ ದೈವಕೆ ಬಿಡು ಚಿಂತೆ
ಇಷ್ಟಾನಿಷ್ಟದ ಲೆಕ್ಕ ಕರಗದೆ ಬಿಡದುಷ್ಟ
ಲೋಕವೆ ಮಾಯದ ಸಂತೆ
ಹುಟ್ಟೊಂದು ಹೋರಾಟ ಕಟ್ಟಿರುವೆ ಸಹವಾಸ
ಬದುಕೊಂದು ಜಂಜಾಟವಂತೆ
ಗಟ್ಟಿಮುಟ್ಟಾದ ದೇಹ ಸುಟ್ಟು ಬೀಳುವ ಮುನ್ನ
ಇಟ್ಟೀರು ಹರಿ ಮೇಲೆ ಚಿಂತೆ
ನಿನ್ನರಿವು ನನಗಾಗಿ, ನಿನ್ನೊಳಗೆ ಒಂದಾಗಿ
ನನ್ನಲ್ಲಿ ನಾನಿಲ್ಲವಂತೆ
ಜ್ಞಾನವೇ ನೀನಾಗಿ, ಧ್ಯಾನವೇ ನಾನಾಗಿ
ಇನ್ನೇಕೆ ಜ್ಞಾನಿಯ ಚಿಂತೆ
– ಗುರುಪಾದ ಬೇಲೂರು