“ಕಂತೆ”
ಕಥಾ ಸಾಗರದಲ್ಲಿ ಪ್ರತಿಯೊಂದು ಕಥೆಯೂ ಒಂದೊಂದು ಅಲೆಗಳಿದ್ದಂತೆ. ಸಮುದ್ರ ತನ್ನ ಒಡಲ ನೀರನ್ನು ತುಳುಕಿ ಚೆಲ್ಲುತ್ತದೆಯೇನೋ ಎಂಬಂತೆ ಭೋರ್ಗರೆಯುತ್ತದೆ. ಅಲೆಗಳ ಅಬ್ಬರದಿಂದ ಉಕ್ಕಿದ ನೀರನ್ನು ಮತ್ತೆ ತನ್ನ ಒಡಲಿಗೆ ತುಂಬಿಸುತ್ತಾ, ಆ ಒಡಲ ಭಾರಕ್ಕೊ ಏನೋ ತೀರಕ್ಕೆ ಬಂದು ಅಪ್ಪಳಿಸುತ್ತಾ, ತನ್ನಿರವು ತೋರಿಸಲು ಸದ್ದು ಮಾಡುವಂತೆ ಈ ಕಥೆಗಳೂ ಸದಾ ಸದ್ದು ಮಾಡುತ್ತಾ ಸಮಾಜವನ್ನು ಎಚ್ಚರಿಸುತ್ತಿರುತ್ತವೆ.
ಕಥೆಗಳ ಪ್ರಕಾರವನ್ನು ಓದಬೇಕು ಎನ್ನುವ ತುಡಿತ ಬಂದಾಗಲೆಲ್ಲಾ ನನಗೆ ಬಹಳ ಸಾರಿ ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಕಾಡುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ಸಾಹಿತಿಗಳಾದ ಮಾಸ್ತಿರವರು, ಕಾರಂತರು, ಕುವೆಂಪುವರು, ವಿ.ಕೃ.ಗೋಕಾಕ್‌ರವರು, ಕಂಬಾರರು, ಅಡಿಗರು ಇನ್ನು ಅನೇಕರು ಬರೆದಿರುವಂತಹ ಸಾಮಾಜಿಕ ಬದಲಾವಣೆಯ ತಳಹದಿ ಹೊಂದಿದ ಕಥೆಗಳು ಈಗಾಗಲೇ ಜನಮಾನಸದಲ್ಲಿ ಬೇರೂರಿವೆ. ಅನಂತಮೂರ್ತಿ, ಕಾರ್ನಾಡ್, ಎಸ್.ಎಲ್.ಭೈರಪ್ಪ, ತೇಜಸ್ವಿ, ರವರಂತಹ ಹೊಸ ಸಾಮಾಜಿಕ ಕಲ್ಪನೆಯ ಪ್ರತಿಪಾದಕ ಕಥೆಗಳು ಎಲ್ಲರಿಗೂ ತಲುಪಿವೆ. ಇನ್ನು ಅನಕೃ, ತ.ರಾ.ಸು, ತ್ರಿವೇಣಿ, ವೈದೇಹಿ ರಂತಹವರು ಬರೆದಿರುವ ಸಾಂಸಾರಿಕ ಜೀವನದ ಚಿತ್ರಣಗಳ ಕಾದಂಬರಿಗಳು ಕುಟುಂಬ, ಸಮಾಜ ದೇಶ, ಪ್ರಕೃತಿ ಇವುಗಳ ಸಮನ್ವಯದೊಂದಿಗೆ ಬದುಕುವ, ಬದುಕಬೇಕಾದ ಬಗೆಯನ್ನು ತಿಳಿಸಿಕೊಡುತ್ತವೆ. ಇವರುಗಳ ಪ್ರಸಿದ್ಧ ಮೌಲಿಕ ಕೃತಿಗಳನ್ನು ಸಮಾಜವು ಈಗಾಗಲೇ ಓದಿದೆ, ಅರಗಿಸಿಕೊಂಡಿದೆ ಮತ್ತು ನೂರಾರು ವೇದಿಕೆಗಳಲ್ಲಿ ಇವರುಗಳ ಆಶಯವನ್ನು ಪುನರುಚ್ಛರಿಸಿ ಮರುನೆನಪಿಗೂ ತರುತ್ತಿರುತ್ತವೆ.
ಇದೆಲ್ಲದರ ನಂತರ, ಈಗ ಡಾಕ್ಟರ್‌ಗಳು, ಇಂಜಿನಿಯರ್‌ಗಳು, ಐಟಿಬಿಟಿ ಟೆಕ್ಕಿಗಳು ಬಿಡುವಿಲ್ಲದ ವೃತ್ತಿಯಲ್ಲಿದ್ದುಕೊಂಡೂ ಸಹ ಕಥಾಲೋಕಕ್ಕೆ ಪ್ರವೇಶಿಸಿದ್ದು, ನೂತನ ಕಥೆಗಳ ಅವಿಷ್ಕಾರವಾಗುತ್ತಿದೆ. ನಾನೂ ತಾಂತ್ರಿಕತೆಯ ಹಿನ್ನೆಲೆಯಿಂದ ಬಂದವನಾದ್ದರಿಂದ, ವೈಜ್ಞಾನಿಕ ಹಿನ್ನೆಲೆಯ ಕಥೆಗಳನ್ನು ಪೋಣಿಸಲು ಹೆಚ್ಚೆಚ್ಚು ಉತ್ಸುಕನಾಗಿದ್ದೆ. ಹಾಗಾಗಿಯೇ ಮಿಂಚಿನಬಳ್ಳಿ, ಅಗರ್ತ, ಒಡಲಾನಲ, ಫೋರ್ಡಿ ಇತ್ಯಾದಿ ಕಥೆಗಳಲ್ಲಿ ತಾಂತ್ರಿಕತೆಯೇ ಹೆಚ್ಚು ವಿಜೃಂಭಿಸುತ್ತಿತ್ತು. ಮೌಲಿಕ ಸಾಹಿತ್ಯ ಕೊನೆ ಬೆಂಚಿನಲ್ಲಿ ಕೂರುತ್ತಿತ್ತು. ಬೇರೆ ಬೇರೆ ಕಥಾ ಸಂಗ್ರಹಗಳನ್ನು ಓದಲು ಪ್ರಾರಂಭಿಸಿದ ಮೇಲೆ ಖ್ಯಾತನಾಮರ ಕೆಲವು ಕಥೆಗಳು ಎಷ್ಟು ಮನದಲ್ಲಿ ಬೇರೂರಿ ನಿಂತು ಬಿಡುತ್ತಿದ್ದವು ಎಂದರೆ ಕೆಲವು ದಿನಗಳವರೆಗೆ ಅದೇ ಲೋಕದಲ್ಲಿ ಮಗ್ನನಾಗಿರುವಂತೆ ನನ್ನನ್ನು ಮಾಡಿ ಬಿಡುತ್ತಿದ್ದವು. ಅದಕ್ಕೆ ಕಾರಣ ಆ ಕತೆಗಳಲ್ಲಿದ್ದ ಮೌಲಿಕ ಸಾಹಿತ್ಯ. ಬರಿಯ ಪದಗಳ ಪೋಣಿಸುವುದಕ್ಕೆ ಸೀಮಿತವಾದ ಕಥೆಗಳಲ್ಲ ಅವುಗಳು. ಅಲ್ಲಿ ಪ್ರತಿ ಪದವನ್ನು ಪೋಷಿಸಲಾಗಿತ್ತು. ಒಂದು ವಾಕ್ಯದಲ್ಲಿ ಕಥೆಗಾರನಿಗೆ ತನ್ನ ಆಶಯವನ್ನು ಸಮರ್ಥವಾಗಿ ಬಿಂಬಿಸಬಲ್ಲ ಸಾಮರ್ಥ್ಯವಿತ್ತು.
ಕಥೆಗಳನ್ನು ಏಕೆ ಬರೆಯಬೇಕು: ಕಥೆಗಳನ್ನು ಏಕೆ ಓದಬೇಕು ಎಂಬ ಮೂಲಭೂತ ಅನುಮಾನದೊಂದಿಗೆ ಹಳೆಯ ತಲೆಮಾರಿನ ಮತ್ತು ಈಗಿನ ಈ ಕಥೆಗಳನ್ನು ಓದ ತೊಡಗಿದೆ. ನವ್ಯ ಕಥೆಗಳಲ್ಲಿ ಅಂತಹ ಪದ ಪೋಷಣೆಯನ್ನು ಹುಡುಕುವ ಆಸೆ. ಕಥೆಯೊಂದು ಕಾವ್ಯವಾಗುವ ಬಗೆಯನ್ನು ನೋಡುವ ಕುತೂಹಲ.
ಅಂತಹ ಕೃತಿಗಳ ಮುತ್ತಿನ ಹಾರ ಮಾಡುವ ತವಕ. ನಮ್ಮ ಓದುಗರಿಗೆ ಅವುಗಳನ್ನು ಪರಿಚಯಿಸುವ ಆಸೆ. ನಿಮಗೆ ಅಂತಹ ಕಥೆಗಳು ಸಿಕ್ಕರೆ, ನೀವು ಬರೆದಿದ್ದು ನಿಮಗೆ ತೃಪ್ತಿ ತಂದಿದ್ದರೆ ಅಂತಹ ಕಥೆಗಳನ್ನು ನನಗೂ ಕಳಿಸಿ. ಅದನ್ನು ಪರಿಚಯಿಸೋಣ.
ನಾನೆಣಿಸಿದಂತೆ ಇದು ಕಥೆಗಳ ವಿಮರ್ಶೆಯಲ್ಲ. ಸುಂದರ ಕಥೆಗಳ ರಸಸ್ವಾದವನ್ನು ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಾಹಿತ್ಯದ ಬಗ್ಗೆ ಒಲವು ತೋರುವವರಿಗೆ ಉಣಬಡಿಸುವ ಕೆಲಸ.
ನನ್ನ ಸ್ನೇಹಿತ ಕಂನಾಡಿಗಾರವರು ಜಯಂತ ಕಾಯ್ಕಿಣಿಯವರ “ನೋ ಪ್ರಸೆಂಟ್ಸ್ ಪ್ಲೀಸ್” ಪುಸ್ತಕ ಓದಲು ಕೊಟ್ಟಿದ್ದಾರೆ. ನಾರಾಯಣ್ ರವರ ಇಹದ ಪರಿಮಳದ ಎರಡನೇ ಓದಿಗಾಗಿ ಇಟ್ಟುಕೊಂಡಿದ್ದೇನೆ. ಆ ಕಥೆಗಳ ಬಗ್ಗೆ ಮುಂದೆ ತಿಳಿಸುತ್ತೇನೆ.
ಗುರುಪಾದ ಬೇಲೂರು