ಬಲ್ಲಾಳರಾಯನ ದುರ್ಗ

ʼಬಲ್ಲಾಳ ರಾಯನ ದುರ್ಗʼ ಎಂಬ ಹೆಸರು ಕೇಳಿದೊಡನೆ ಒಂದು ರೀತಿಯ ಮೈನವಿರೇಳುವ ಅನುಭವ. ʼಅಮರೇಂದ್ರ ಬಾಹುಬಲಿʼ ಎಂದು ಕಾಟ್ಟಪ್ಪ ಜೋರಾಗಿ ಉದ್ಗರಿಸಿದಾಗ, ಹಿನ್ನೆಲೆ ಸಂಗೀತ ಎದೆ ನಡುಗಿಸಿದಾಗ ಆಗುವಂತಹ ಅನುಭವ ಅದು. ಈ ದುರ್ಗ ಚಿಕ್ಕಂದಿನಿಂದಲೂ ನನಗೆ ಕುತೂಹಲದ ಜಾಗ. ಒಮ್ಮೆಯೂ ಅದನ್ನು ನೋಡುವ ಅವಕಾಶ ಒದಗಿ ಬಂದಿರಲಿಲ್ಲ. ಹಾಗಂತ ಹೊಯ್ಸಳರ ಕಾಲದ ಈ ಕೋಟೆ ನಮ್ಮೂರಿನಿಂದ ದೂರವೇನೂ ಇರಲಿಲ್ಲ. ಬೇಲೂರಿನಿಂದ ಮೂಡಿಗೆರೆ, ಕೊಟ್ಟಿಗೆಹಾರ ದಾಟಿ ಕಳಸದ ರಸ್ತೆಯಲ್ಲಿ ಸುಂಕಸಾಲೆಗೆ ತಲುಪಲಿಕ್ಕೆ ಒಂದೂವರೆ ಗಂಟೆಯ ಮಿತಿ ಸಾಕು.

ಸುಂಕಸಾಲೆಯಿಂದ ಐದಾರು ಕಿಲೋಮೀಟರ್‌ ಒಳಗಡೆ ಹೋದರೆ ರಾಣಿ ಝರಿ ವ್ಯೂ ಪಾಯಿಂಟ್.‌ ಸಾಮಾನ್ಯವಾಗಿ ಪ್ರಕೃತಿ ಸೌಂದರ್ಯವನ್ನು ಸೇಫ್‌ ಆಗಿ ಅನುಭವಿಸಬೇಕು ಎನ್ನುವ ಇರಾದೆಯಿರುವರೆಲ್ಲಾ ಈ ವ್ಯೂ ಪಾಯಿಂಟ್‌ನಲ್ಲಿ ಸಿಗುವ ಅದ್ಭುತ ದೃಶ್ಯಗಳಿಗೆ ಮನಸೋತು ತೃಪ್ತಿಪಟ್ಟುಕೊಳ್ಳುತ್ತಾರೆ. ಆದರೆ ಯುವ ಮನಸ್ಸುಗಳು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ರಾಣಿ ಝರಿಯ ಗುಡ್ಡದ ತುದಿ ಅವನ್ನು ಕೂಗಿ ಕರೆಯುತ್ತದೆ. ಬಲ್ಲಾಳ ರಾಯನ ದುರ್ಗದ ಕೋಟೆಯ ಅವಶೇಷಗಳು, ಬೆಟ್ಟದ ಸಾಲಿನುದ್ದಕ್ಕೂ ಹರಿದಿರುವ ಕೋಟೆಯ ಗೋಡೆಯ ಸಾಲುಗಳು ಅವರನ್ನು ಕೆಣಕುತ್ತವೆ. ಅಲ್ಲಿಯ ಹಸಿರು ಹೊದಿಕೆಯ ಮೈದಾನಗಳಲ್ಲಿ, ಬೀಸುವ ತಂಗಾಳಿಯಲ್ಲಿ, ಕೈ ಚಾಚಿ, ಮೈ ಚಾಚಿ ಅಡ್ಡಾಡುವ ಆಸೆ ಗರಿಗೆದರುತ್ತದೆ. ಬಂಡಾಜೆ  ಯಲ್ಲಿ ಒಂದು ಸಾವಿರ ಅಡಿ ಕೆಳಕ್ಕೆ ಧುಮುಕುವ ಜಲಪಾತದ ಸೊಬಗನ್ನು ಆ ಜಲರಾಶಿ ಬೀಳುವ ಜಾಗದ ತುಟ್ಟ ತುದಿಯಿಂದ ನೋಡುವ ಸೊಗಸು ರಮಣೀಯ. ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವ ನೀರಿಗಿಂತ ವೇಗವಾಗಿ, ಸಾವಿರ ಅಡಿ ಪ್ರಪಾತ ಸೇರುವುದು ನಿಶ್ಚಿತ. ಬಂಡೆಯ ತುದಿ ಹಿಡಿದುಕೊಂಡೋ, ಕಾಲು ಚಾಚಿ ಮಲಗಿಕೊಂಡೋ ಇಂಚು ಇಂಚು ದೃಷ್ಟಿಯನ್ನು ಕೆಳಗೆ ಹರಿಸಿ ನೋಡಿದರೆ, ಪ್ರಕೃತಿ ತನ್ನ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾಳೇನೋ ಅನ್ನಿಸಿ ಬಿಡುತ್ತದೆ. ಸ್ನೇಹಿತನೊಬ್ಬ ಇದ್ದು, ಅವನು ನಿಮ್ಮ ಕಾಲನ್ನೋ, ಕೈಯನ್ನೋ ಭದ್ರವಾಗಿ ಹಿಡಿದುಕೊಳ್ಳುವುದು ಒಳ್ಳೆಯದು.  ಇಲ್ಲವಾದಲ್ಲಿ, ಧುಮುಕುವ ನೀರಿನ ಜೊತೆ ಜಾರುವ ಆಸೆ ಮಿತಿ ಮೀರುವ ಸಂಭವ ಬಹಳವಿರುತ್ತದೆ.

ಎಲ್ಲಾ ಗಿರಿ ಪರ್ವತಗಳೂ ಹೀಗೆಯೇ ಇರುತ್ತವೆ. ಎಲ್ಲಾ ಜಲಪಾತಗಳೂ ಹೀಗೆಯೇ ಇರುತ್ತದೆ. ಬಲ್ಲಾಳರಾಯನ ದುರ್ಗದ ವಿಶೇಷತೆ ಏನು ಎಂದು ಕೇಳಬಹುದೇನೋ. ಬಲ್ಲಾಳರಾಯನದುರ್ಗ ಇರುವ ಲೋಕೇಷನ್‌ ಮತ್ತು ಅದರೆ Strategic Point ಬಹಳ ವಿಶಿಷ್ಟವಾಗಿದೆ. ಕರಾವಳಿಯಿಂದ ಘಟ್ಟದ ಮೇಲೆ ಹತ್ತಿದರೆ ಪಶ್ಚಿಮ ಘಟ್ಟಗಳ ಸಾಲು ಸಾಲು ಶಿಖರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅವುಗಳನ್ನು ದಾಟಿ ಈಚೆ ಬಂದರೆ ಎತ್ತರ ಪ್ರದೇಶದ ಮಲೆನಾಡು ನಂತರ ಹುಲ್ಲುಗಾವಲು. ಇದು ಕರ್ನಾಟಕದ ಮೇಲ್ಮೈ ವಿಶೇಷಣಗಳೂ ಹೌದು.ʼಬಲ್ಲಾಳ ರಾಯನ ದುರ್ಗʼ ಈ ಪಶ್ಚಿಮ ಘಟ್ಟಗಳ Ridge Point ನ ಮೇಲಿದೆ.  ಇಲ್ಲಿ ನಿಂತರೆ ಪಶ್ಚಿಮಕ್ಕೆ ಕರಾವಳಿಯ ಅರಬ್ಬೀ ಸಮುದ್ರದ ತೆಳುಗೆರೆಯನ್ನು ನೋಡಬಹುದು. ಬೆಳ್ತಂಗಡಿ, ಉಜಿರೆಯಂತ ಊರುಗಳು ಕಾಣುತ್ತವೆ. ನಂತರ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ, ಕಣ್ಣಿಗೆ ಕಾಣುವ ಕಡೆಯೆಲ್ಲ ಬೆಟ್ಟಗಳ ಸಾಲೇ ಸಾಲು.

ಒಂದಕ್ಕೊಂದು ಸ್ಪರ್ಧೆಗೆ ನಿಂತ ಹಾಗೆ. ಒಂದಕ್ಕಿಂತ ಒಂದು ಎತ್ತರ. ಅರಣ್ಯದಿಂದ ತುಂಬಿ ಹೋಗಿರುವ ಬೆಟ್ಟಗಳ ಶ್ರೇಣಿ,

ಹಸಿರು ಮೈದಾನದಿಂದ ಮೈಸೂರು ಸಿಲ್ಕ್‌ ಸೀರೆಯುಟ್ಟಂತೆ ಕಂಗೊಳಿಸುವ, ಬೆಟ್ಟಗಳು  ಸೀರೆಯ ಸೆರಗಿನಂತೆ ಸುಂದರ ಬೆಟ್ಟಗಳ ಕಣಿವೆಗಳು, ಅವುಗಳ ಮಧ್ಯೆ ಸೀರೆಯ ಅಂಚುಗಳೆಂಬಂತೆ ಹಾದುಹೋಗುವ ತರುಲತೆಗಳು ರಮಣೀಯವಾದ ಶೃಂಗಾರ.

ಇವೆಲ್ಲಾ ನಮ್ಮ ಕಾಲ ಕೆಳಗಿನ  ಪ್ರಪಾತದಲ್ಲಿ ಕಾಣುವ ದೃಶ್ಯಗಳಾದರೆ, ನೀಲಿ ಆಕಾಶ, ಬೆಳ್ಳಿ ಮೋಡಗಳು, ಶರದೃತುವಿನಲ್ಲಿ ನಮ್ಮ ನಡುವೆಯೇ ಅಡ್ಡಾಡುವ ಮೋಡಗಳು, ನಮ್ಮೊಡನೆ ನಿಲ್ಲುತ್ತವೆ.  ಕೆಲವು ಕ್ಷಣಗಳಲ್ಲೇ ಕಣ್ಣ ಮುಂದೆ ಕುಣಿಯುವ ಈ ದೃಶ್ಯ ವೈಭವವನ್ನು ತನ್ನ   ಹವೆಯಿಂದ         ಮರೆಮಾಚಿ ಸುತ್ತಲೂ ಬಿಳಿಯ ಗೋಡೆಯನ್ನು ಕಟ್ಟ ಬಲ್ಲ ಮೋಡಗಳ ರಾಶಿ. ತಿಳಿ ಮೋಡಗಳು ಮರೆಯಾಗುತ್ತಿದ್ದಂತೆ ಮತ್ತೆ ಕಣ್ಣೆದುರಿಗೆ ಧುತ್ತೆಂದು ನಿಲ್ಲುವ ಸಾವಿರಾರು ಅಡಿ ಕೆಳಗಿನ ರಮಣೀಯ ಕಣಿವೆ ಪ್ರದೇಶ.

ಅಬ್ಬಾ! ಹೇಗೆ ವರ್ಣಿಸುವುದು. ರಾಣಿ ಝರಿಯ ವ್ಯೂ ಪಾಯಿಂಟ್‌ನಲ್ಲಿಯೇ ಇಂತಹ ಪ್ರಕೃತಿಯ ದೃಶ್ಯ ದಸರಾ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದರೆ, ಇನ್ನೂ ಆ ದುರ್ಗ ಬೆಟ್ಟವನ್ನು ಹತ್ತುವಾಗ ಮತ್ತು ಹತ್ತಿದಾಗ ಹೇಗಿರುತ್ತದೆ ಎಂಬ ಕುತೂಹಲ ನನ್ನನ್ನು ಬಹಳ ಕಾಡುತ್ತಿತ್ತು.

ಎರಡು ವರ್ಷಗಳ ಹಿಂದೆ ಸ್ನೇಹಿತರಾದ ವೇದಾನಂದಮೂರ್ತಿಯವರ ಜೊತೆ ಈ ರಾಣಿ ಝರಿ ವ್ಯೂ ಪಾಯಿಂಟ್‌ಗೆ ಬಂದು ಹೋಗಿದ್ದೆ. ಅಲ್ಲಿ ಕಳೆದಿದ್ದು ಒಂದೆರಡು ತಾಸುಗಳಾದರೂ ಸಂಜೆಯ ಸೂರ್ಯಾಸ್ತಮಾನದ ಸಮಯದಲ್ಲಿ ಅಲ್ಲಿಗೆ ಹೋಗಿದ್ದರಿಂದ ಆ ದೃಶ್ಯಗಳು ನನ್ನ ಮನಸ್ಸಿನಲ್ಲಿ ಮುದ್ರೆ ಬಿಟ್ಟಿದ್ದವು. ಆಳವಾದ ಕಣಿವೆ, ಮುಸ್ಸಂಜೆಯ ಹೊಂಬೆಳಕು ನೆರಳಿನಾಟದಲ್ಲಿ, ಕಪ್ಪಗೆ ಅಲ್ಲಲ್ಲಿ ಬಿಸಿಲಿನ ಶಲ್ಯ ಹೊದ್ದು ಮಲಗಿದಂತೆ ಕಾಣುತ್ತಿತ್ತು. ಸಂಜೆಯ ಮಂಜುಗಾಳಿಯ ತಿಳಿ ಬಿಳಿ ಅರಳೆಗಳು, ಕಾಡಿನ ಮರಗಳ ಮಧ್ಯೆ ವಕ್ರ ವಕ್ರವಾಗಿ ಹೋಗುತ್ತಿದ್ದವು. ಇಳಿ ವಯಸ್ಸಿನ ಮುದಕನೊಬ್ಬ ಛಾವಡಿ ಮುಂದೆ ಕುಳಿತು ಹೊಗೆ ಬತ್ತಿ ಸೇದುತ್ತಾ ವಿಶ್ರಮಿಸಿಕೊಳ್ಳುತ್ತಿದ್ದಾನೇನೋ ಎನ್ನುವಂತೆ.

 ಆಕಾಶದಲ್ಲಿ ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಇಳಿಯುತ್ತಿದ್ದಂತೆ, ಶುರುವಾಗಿತ್ತು ನೋಡಿ ಬಣ್ಣ ಬಣ್ಣದ ರಂಗಿನೋಕುಳಿ. ಕಿತ್ತಳೆ, ನಸುಗೆಂಪು, ನೇರಳೆ, ದಿಗಂತ ಕ್ಷಣ ಕ್ಷಣಕ್ಕೂ ವಿವಿಧ ಬಣ್ಣಗಳಲ್ಲಿ ಮಿಂದೇಳುತ್ತಾ ಬಣ್ಣ ಬಣ್ಣದ ಮೇಳವನ್ನೇ ನಡೆಸಿಬಿಟ್ಟಿತ್ತು. ಸೂರ್ಯನನ್ನು ಆ ಕ್ಷಣದ ಮಟ್ಟಿಗೆ ಮರೆ ಮಾಡುತ್ತಿದ್ದ ಮೋಡಗಳ ಸಂದಿನಿಂದ, ತಾನೂ ಇನ್ನೂ ಈ ಪ್ರಕೃತಿಯ ಲಾಸ್ಯವನ್ನು ನೋಡಬೇಕಿದೆ ತಾಳು ಎನ್ನುವಂತೆ ಸೂರ್ಯ ಮೋಡಗಳ ಸಂದುಗಳಿಂದ ಇಣಕಿ ಹಾಕುತ್ತಿದ್ದ. ಮೋಡದ ಸುತ್ತಲಿಂದ ಹೊರಟ ಅವನ ಇಣುಕು ನೋಟಗಳು ಬೆಳಕಿನ ಕೋಲಾಗಿ ಮಲಗಲು ಅಣಿಯಾಗುತ್ತಿದ್ದ ಕಣಿವೆಯನ್ನು, ಕಂದನನ್ನು ಮುದ್ದು ಮಾಡಿ ಕೆನ್ನೆ ಸವರುವ ತಾಯಿಯಂತೆ ನೇವರಿಸುತ್ತಿದ್ದವು.

ರಾಣಿ ಝರಿಯ ವ್ಯೂ ಪಾಯಿಂಟ್‌ನಲ್ಲಿ ಈ ದೃಶ್ಯವನ್ನು ಕಣ್ಣಿಗೆ, ಮನಸ್ಸಿಗೆ ತುಂಬಿಕೊಳ್ಳುತ್ತಾ ಅದು ಸಾಲದಾಗಿ, ಜಾರಿ ಹೋಗುತ್ತಿರುವ ಈ ಕ್ಷಣವನ್ನು ಹೇಗೆ ಶಾಶ್ವತ ಮಾಡಿಕೊಳ್ಳಬಹುದು ಎಂದು ಚಡಪಡಿಸುತ್ತಾ ನಿಂತಿದ್ದೆ. ಅದೆಷ್ಟು ಹೊತ್ತೂ ಈ ಸಂಜೆ ರಂಗಿನ ಆರತಿಯನ್ನು ನೋಡುತ್ತಾ ನಿಂತೆನೋ ನನಗೆ ಗೊತ್ತಿಲ್ಲ. ವೇದಾನಂದ ಮೂರ್ತಿಯವರು, ವಾಪಾಸ್‌ ಹೋಗೋದು ತಡ ಆದ್ರೆ ಕಷ್ಟ ಸರ್‌, ರಸ್ತೆ ಚೆನ್ನಾಗಿಲ್ಲ, ಬೇಗ ಹೊರಡೋಣ ಅಂದಾಗ, ಈ ಲೋಕಕ್ಕೆ ಬಂದೆ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಿದ್ದೆವು.

ಅಂದಿನಿಂದಲೂ ಆ ಜಾಗ ನನ್ನನ್ನು ಕಾಡುವುದನ್ನು ಬಿಡಲಿಲ್ಲ. ಬೆಂಗಳೂರಿನಿಂದ ಹುಟ್ಟಿದ ಊರು ಬೇಲೂರಿಗೆ ತಿಂಗಳಿಗೊಮ್ಮೆ ಹೋಗುತ್ತಿದ್ದೆ. ಆದರೆ ಈ ದುರ್ಗಕ್ಕೆ ಹೋಗುವ ಆಸೆ ಮಾತ್ರ ಈಡೇರುತ್ತಿರಲಿಲ್ಲ. ಮಕ್ಕಳ ಮುಂದೆ, ಈ ಆಸೆ ಹೇಳಿಕೊಂಡಾಗ ಅವರು ಆ ಜಾಗ ನೋಡಲೇಬೇಕೆಂದು ಎಷ್ಟು ಹಟ ಮಾಡಿದರೆಂದರೆ, ಒಮ್ಮೆ ಬೇಲೂರಿಗೆ ಹೋದಾಗ, ಹೊರಟೇ ಬಿಟ್ಟೆವು ಮಕ್ಕಳು, ಮೊಮ್ಮಕ್ಕಳಾದಿಯಾಗಿ. ಸುರಿವ ಮಳೆಯಲ್ಲೇ ನಮ್ಮ ಪ್ರಯಾಣ., ಮಲೆನಾಡ ಮಳೆ ನಿಮಗೆ ಗೊತ್ತಿರಲಿಕ್ಕೆ ಸಾಕು. ಬೆಂಗಳೂರಿನಂತೆ ತಾಸೊಂದರಲ್ಲಿ ಸುರಿದು ಮಾಯವಾಗುವ ಮಳೆಯಲ್ಲ. ಹಿಡಿದರೆ ದಿನಪೂರ್ತಿ ಧೋ ಧೋ ಎಂದು ಸುರಿಯುವ ಮಳೆ. ರಸ್ತೆಗಳು ಕಾಲುವೆಗಳಾಗಿ ಹರಿದು ಬಿಡುತ್ತವೆ, ನನ್ನ ಹುಚ್ಚು, ಮತ್ತು ಮಕ್ಕಳ ಒತ್ತಾಸೆಯಿಂದ, ನೋಡೇ ಬಿಡೋಣ ಎಂದು ಹೊರಟೇ ಬಿಟ್ಟೆವು. ಮೂಡಿಗೆರೆ ದಾಟಿ ಬಣಕಲ್‌ ಬರುವ ಹೊತ್ತಿಗೆ, ಮಳೆ ವಿಪರೀತ ಹೆಚ್ಚಾಯಿತು. ಎಲ್ಲರನ್ನೂ ಹೊರಡಿಸಿಕೊಂಡು ಪ್ರಯಾಣ ಶುರು ಮಾಡಿದ್ದು ಹನ್ನೊಂದುವರೆಗೆ. ಮಳೆಯಲ್ಲಿ ನಿಧಾನದ ಪ್ರಯಾಣ ಬೇರೆ. ಗಂಟೆಯಾದರೂ ನಮ್ಮ ದಾರಿ ಅರ್ಧ ಕ್ರಮಿಸಿರಲಿಲ್ಲ. ಯಾರೂ ಊಟ ಮಾಡಿರಲಿಲ್ಲ. ಚಿತ್ರಾನ್ನ, ಮೊಸರನ್ನ ಕಟ್ಟಿಕೊಂಡು ಬಂದಿದ್ವಿ ಅನ್ನಿ. ಕೊನ್ನೆಗೆ 85 ವರ್ಷದ ಅಜ್ಜಿಯಿಂದ 6 ತಿಂಗಳ ಮರಿಮೊಮ್ಮಗುವನ್ನು ಕಟ್ಟಿಕೊಂಡು ಹೊರಬಿದ್ದ ನಮ್ಮ ತಂಡ, ಈ ಮಳೆಯಲ್ಲಿ ಈ ಸಮಯದಲ್ಲಿ ಬಲ್ಲಾಳ ರಾಯನದುರ್ಗದಂತಹ, ಯುವಕರೂ ಹೆದರುವ ಜಾಗಕ್ಕೆ ಹೋಗುವುದು ಬೇಡ ಎಂದು ತೀರ್ಮಾನಿಸಿತು. ದಾರಿ ಬದಿಯಲ್ಲಿ ಗುಡ್ಡದ ಮೇಲೊಂದು ಭೈರವೇಶ್ವರನ ಪುಟ್ಟ ದೇವಸ್ಠಾನ ಇತ್ತು. ಅಲ್ಲಿಗೆ ಹೋದೆವು. ದೇವಸ್ಥಾನದ ಬೀಗ ಹಾಕಿತ್ತು. ಆದರೆ  ಪಕ್ಕದಲ್ಲಿ  ಹೋಮ ಹವನ ಮಾಡಲೆಂದು ಕಟ್ಟಿದ್ದ    ಶೀಟ್‌ ಹಾಕಿ ಕವರ್‌ ಮಾಡಿದ್ದ ಹಾಲ್‌ ಇತ್ತು. ನಮ್ಮ ಅದೃಷ್ಟಕ್ಕೆ ಐದಾರು ಪ್ಲಾಸ್ಟಿಕ್‌ ಕುರ್ಚಿಗಳನ್ನು ಹಾಕಿದ್ದರು. ಪಕ್ಕದಲ್ಲಿ ಪುಟ್ಟ ಕೆರೆ, ಬಾಳೆ ತೋಟ, ಸರಿ ದೇವಸ್ಥಾನಕ್ಕೆ ಒಂದು ನಮಸ್ಕಾರ ಹಾಕಿ, ಅಲ್ಲಿಯೇ ಬಾಳೆ ಎಲೆ ತಗೊಂಡು ತಂದಿದ್ದ, ಚಿತ್ರಾನ್ನ, ಮೊಸರನ್ನ ಮುಗಿಸಿ ಅಲ್ಲಿಂದ ಹಿಂದಿರುಗಿ ಬಂದೆವು.

ಈ ಸಾರಿಯೂ ಬಲ್ಲಾಳರಾಯನದುರ್ಗ ನಮಗೆ ಮಿಸ್ ಆಯಿತು. ಆದರೆ ಬೆಟ್ಟ ಹತ್ತಬೇಕು ಎನ್ನುವ ಆಸೆ ಮಾತ್ರ ಇನ್ನೂ ಹೆಚ್ಚಾಯಿತು.

ಅದಕ್ಕೆ ಕಾಲ ಕೂಡಿ ಬಂದಿದ್ದು ಈ ಬಾರಿಯ ದೀಪಾವಳಿ ಸಮಯದಲ್ಲಿ, ಕೋವಿಡ್‌ ಹಾವಳಿ ಎಲ್ಲಾ ಕಡೆ ಜಾಸ್ತಿಯಾಗಿತ್ತು. ಮೊದಲೇ ಬೆಂಗಳೂರು ಅಸ್ತಮಾ ರೋಗಕ್ಕೆ ಹೇಳಿ ಮಾಡಿಸಿದ ಜಾಗ. ಮಾಲಿನ್ಯ ಅನ್ನೋದು ಮಾಮೂಲಿ ದಿನಗಳಲ್ಲೇ ವಿಪರೀತ, ಅದರ ಜೊತೆಗೆ ದೀಪಾವಳಿ ಪಟಾಕಿ ಹೊಗೆ ಸೇರಿಬಿಟ್ಟರೆ ಮುಗಿದು ಹೋಯಿತು. ಉಸಿರಾಡುವುದಕ್ಕೆ ಕಷ್ಟ ಪಡುವ ಪ್ರಸಂಗ, ಹಾಗಾಗಿ ಪ್ರತಿ ವರ್ಷ ದೀಪಾವಳಿಗೆ ನಾವು ಬೇಲೂರಿಗೆ ಹೋಗುವುದು ರೂಢಿ. ಈ ಬಾರಿ ಕೋವಿಡ್‌ ಭೀತಿ ಬೇರೆ.

ಹಾಗಾಗಿ ಈ ಸಲ ಬೇಲೂರಿನಲ್ಲಿ ದೀಪಾವಳಿ ಕಳೆಯಲು ನಿರ್ಧಾರ ಮಾಡಿದೆವು. ಅದರಂತೆ ಊರಿಗೆ ಹೋದೆವು.  ಹಣತೆ ಹಚ್ಚಿಟ್ಟುಕೊಂಡು, ಹಬ್ಬದ ಅಡುಗೆ ಮಾಡಿಕೊಂಡು ಮನೆಯಲ್ಲಿ ದೀಪಾವಳಿ ಆಚರಿಸಿಕೊಂಡೆವು. ಆಗ ಬಂದ ಐಡಿಯಾ ಭಾನುವಾರ ಏಕೆ ಬಲ್ಲಾಳರಾಯನ ದುರ್ಗಕ್ಕೆ ಹೋಗಿ ಬರಬಾರದು ಅಂತ. ಮನೆಯಲ್ಲಿ ಹುಡುಗರು ಹೋಗೋಣ ಅಂತ ಗಲಾಟೆ ಮಾಡಿ, ಅಜ್ಜಿ (ನಮ್ಮ ತಾಯಿ), ಮತ್ತು  ನನ್ನ ಶ್ರೀಮತಿಯವರು ಬೇಡ ಅಂದ್ರು, ಪ್ರತಿ ಸಲವೂ ಅಮಾವಾಸ್ಯೆ ದಿನವೇ ನಿಮಗೆ ಈ ತರಾ ಐಡಿಯಾ ಬರುತ್ತೆ ನೋಡಿ. ನಿಮ್ಮ ತಲೆ ಒಂದು ಸಲ ಟೆಸ್ಟ್‌ ಮಾಡಿಸಬೇಕು ಅಂತ ಹರಿಹಾಯ್ದರು. ಅಮಾವಾಸ್ಯೆಗೂ ಇದಕ್ಕೂ ಏನಮ್ಮ ಸಂಬಂಧ, ಅಂತ ನಾನು ಮೆತ್ತಗೆ ಕೇಳಿದೆ. ನಿಮ್ಮ ವಾರದ ಮಾತುಕತೆಗೆ ಅಂತ ಷೂಟಿಂಗ್‌ಗೆ ದೊಡ್ಡಗದವಳ್ಳಿ ದೇವಸ್ಥಾನಕ್ಕೆ ಹೋಗಿದ್ದು, ಮಹಾಲಯ ಅಮಾವಾಸ್ಯೆ ದಿನ. ಅವತ್ತು ಅಲ್ಲಿ ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದು ನೆನಪಿದೆ ತಾನೆ? ಅಂತ ನೆನಪಿಸಿ ಹೆದರಿಸಿ ಬಿಟ್ಟರು.

ಹೌದು, ಕೆರೆ ಒಳಗೆ ನಮ್ಮ ಸುಮಂತ ಜಾರಿ ಬಿದ್ದಿದ್ದು ಹೌದು. ಆದರೆ ಅವಘಡವೇನೂ ಆಗಿರಲಿಲ್ಲ. ಕೆರೆ ದಡದ ಮೆಟ್ಟಿಲಿನಿಂದ ಎದ್ದು ಬಂದಿದ್ದ. ಮನೇಲಿ ಹೇಳಬಾರದು ಅಂತ ನನ್ನ ತಂಡಕ್ಕೆ ತಾಕೀತು ಮಾಡಿದ್ದೆ. ಆದರೆ ಆ Excitement ಹಂಚಿಕೊಳ್ಳದೆ ಇದ್ರೆ, ಸಮಾಧಾನ ಎಲ್ಲಿ ಆಗಬೇಕು. ಎಲ್ಲರೂ ನಾ ಮುಂದು ತಾ ಮುಂದು ಅಂತ ನನ್ನ ಶ್ರೀಮತಿ ಮುಂದೆ ವರದಿ ಒಪ್ಪಿಸಿಬಿಟ್ಟಿದ್ದರು. ಆವಾಗ ಆಕೆ ನನ್ನ ಕಡೆ ದುರು ಗುಟ್ಟಿ ನೋಡಿದಾಗ ನಾನು ಮನೆ ತಾರಸಿ ನೋಡುತ್ತಿದ್ದೆ.

            ಅಲ್ಲಾರೀ, 60 ವರ್ಷವಾಯಿತು. ಈ ವಯಸ್ಸಿನಲ್ಲಿ ಬೆಟ್ಟ ಹತ್ತುತ್ತೀನಿ ಅಂತ ಹೊರಟಿದ್ದೀರ ಏನು ಹೇಳಲಿ ನಿಮ್ಮ ಹುಚ್ಚಾಟಕ್ಕೆ. ಅದೂ ಕಣಿವೆ ಬೆಟ್ಟ (ನಮ್ಮ ಕಡೆ ಬಲ್ಲಾಳರಾಯನ ದುರ್ಗಕ್ಕೆ ಕಣಿವೆ ಬೆಟ್ಟ ಅಂತೀವಿ) ಹುಡುಗರೇ ಸುಸ್ತಾಗ್ತಾರೆ. ನೀವು ಹೇಗೆ ಹತ್ತುತ್ತೀರಿ. ಉಸಿರು ಹಿಡಿದುಕೊಂಡೆ, ಏನು ಮಾಡ್ತೀರಿʼ.  ಅಂದಳು

“ವಯಸ್ಸು ಅನ್ನೋದು ಬರೀ ನಂಬರ್‌ ಕಣಮ್ಮಾ” ನಾನು ಹೇಳಿದೆ ʼಚಿಂತೆ ಮಾಡ್ಬೇಡಿ, ಇನ್ನು ಆಗೋದೆ ಇಲ್ಲ, ಅನ್ನೋ ಸ್ಥಿತಿ ಬಂದ್ರೆ, ಅಲ್ಲಿಂದಾನೇ ವಾಪಸ್‌ ಬಂದು ಬಿಡ್ತೀವಿ. ಜೊತೆಗೆ ಅಲ್ಲಿ ಹವಾಮಾನ ಸರಿ ಇರಲಿಲ್ಲ ಅಂದ್ರೆ, ಬೆಟ್ಟ ಹತ್ತೋದೆ ಇಲ್ಲ. ರಾಣಿ ಝರಿ ವ್ಯೂ ಪಾಯಿಂಟ್‌ ನೋಡ್ಕೊಂಡು ವಾಪಸ್‌ ಬಂದ್‌ ಬಡ್ತೀವಿ ಸರೀನಾʼ ಅಂದೆ.

ನನ್ನ ಧ್ವನಿಯಲ್ಲಿದ್ದ ಬೇಡಿಕೆಯನ್ನು ಶ್ರೀಮತಿಯವರು ಗುರುತಿಸಿದರು. “ಏನಾದ್ರೂ ಮಾಡ್ಕೊಳ್ಳಿ, ಚಿತ್ರಾನ್ನ, ಮೊಸರನ್ನ ಮಾಡ್ತೀವಿ, ಕಟ್ಟಿಕೊಂಡು ಹೋಗಿ, ಸುಮಂತ, ಮಹೇಶ ಹುಷಾರು ಕಣ್ರಪ್ಪ. ಈ ಯಪ್ಪನ ಬಗ್ಗೆ ಸ್ವಲ್ಪ ಗಮನ ಇಡಿ. ಮಂಗಚೇಷ್ಟೆ ಜಾಸ್ತಿ ಇವರಿಗೆ” ಅಂತ ಒಪ್ಪಿಗೆ ಕೊಟ್ರು.

ಕೊನೆಗೆ ಒಂದು ವಾರ್ನಿಂಗ್‌ ಕೂಡ ʼವಾಪಾಸ್‌ ಬಂದ ಮೇಲೆ ಏನಾದ್ರೂ ಕಾಲು ನೋವು ಮಂಡಿನೋವು ಅಂತ ಅಂದ್ರೋ ಅಷ್ಟೇʼ.             ನನ್ನ ಜೊತೆ ಹೊರಟಿದ್ದ ಸುಮಂತನಿಗೂ ಮಹೇಶನಿಗೂ ಸ್ವಲ್ಪ ಅನುಮಾನ ಇತ್ತು. ಅದು ತಾವು ಬೆಟ್ಟ ಹತ್ತೋ ವಿಷಯಕ್ಕಲ್ಲ. ನನ್ನನ್ನ ಹೇಗಪ್ಪ ಬೆಟ್ಟ ಹತ್ತಿಸೋದು ಅಂತ ಇರಬೇಕು. ಅದಕ್ಕೋಸ್ಕರ preparatory work ಅನ್ನು ಅನುಮತಿ ಸಿಕ್ಕ ಕ್ಷಣದಿಂದ ಶುರು ಮಾಡಿಕೊಂಡು ಬಿಟ್ಟರು. ಪ್ರತಿಯೊಬ್ಬರೂ ಒಂದೊಂದು ಬ್ಯಾಕ್‌ಪ್ಯಾಕ್‌ ತಗೋಬೇಕು. ಅದರಲ್ಲಿ ಏನೇನು ಇರಬೇಕು ಅಂತ ಪಟ್ಟಿ ಮಾಡಿಕೊಂಡು ಆ ಸಾಮಾನುಗಳನ್ನು ತಂದ್ವಿ.

1) ತಲೆಗೆ ಹ್ಯಾಟ್‌ (2) ಎಲೆಕ್ಟ್ರೋಮೈಟ್‌ ಪೌಡರ್‌, 2 ಪ್ಯಾಕೆಟ್‌ (3) ಗ್ಲೋಕೋನ್‌ ಡಿ ಪೌಡರ್-‌2 ಪ್ಯಾಕೆಟ್‌      (4) ಸ್ನಿಕರ್ಸ್‌ ಚಾಕಲೋಟ್‌ ಬಾರ್‌ ಎರಡು   (5) ಡ್ರೈ ಪ್ರೂಟ್ಸ್‌ ಗೋಡಂಬಿ ದ್ರಾಕ್ಷಿ, ನಾಲ್ಕು ಬಾಳೆ ಹಣ್ಣು ಇತ್ಯಾದಿ.  (6) ಸ್ಕಿನ್‌ ಟ್ಯಾನ್‌ ಕ್ರೀಮ್‌ (7) ಆರೆಂಜ್‌ ಜ್ಯೂಸ್‌ (8) ನೀರಿನ ಬಾಟಲ್‌ಗಳು ಒಬ್ಬರಿಗೆ ಎರಡು ಲೀಟರ್‌ (9) ಸೇಫ್ಟಿಪಿನ್‌ಗಳು (10) ವಿಷಲ್‌ (11) ಟ್ರೆಕ್ಕಿಂಗ್‌ ಪೋಲ್‌ಗಳು (12) ರೈನ್‌ ಕೋಟ್‌

ನಮ್ಮ ಸಂಭ್ರಮ ನೋಡಿ, ರಚಿತಾ ಹಟ ಶುರು ಮಾಡಿದಳು. ನಾವೂ ಬರ್ತೇವೆ ಅಂತ. ಗಾರ್ಗಿ, ಮಿತ್ತೂ   ನಂತಹ  ಸಣ್ಣ ಮಕ್ಕಳು ಕಟ್ಟಿಕೊಂಡು ಆಗೋಲ್ಲ. ಈ ಸಲ ಬೇಡ ಅಂದ್ರು ಎಲ್ಲರೂ.

            ಹೊರಡುವಾಗ ಐಡಿಯಾ ಬಂದಿದ್ದು ಅಂದ್ರೆ ಡ್ರೋನ್‌ ಕ್ಯಾಮರಾ ಸಿಗುತ್ತ,  ಅನ್ನೋದು. ಸೀನರಿ ಚೆನ್ನಾಗಿ ಬರುತ್ತೆ. ಮಹೇಶನಿಗೆ ಕೇಳಿದೆ. ಅವನು ಯಾರು ಯಾರಿಗೋ ಫೋನ್‌ ಮಾಡಿದ. ಕೊನೆಗೆ ವ್ಯವಸ್ಥೆ ಆಯ್ತು. ಬೆಳಿಗ್ಗೆ 6.00 ಗಂಟೆಗೆ ರೆಡಿ ಇರ್ತಾರೆ ಅಂದ. ಗುಡ್‌. ಕಳೆದ ಸಲ ರಾಣಿ ಝರಿ ವ್ಯೂ ಪಾಯಿಂಟ್‌ಗೆ ಕರೆದುಕೊಂಡು ಹೋಗಿದ್ದ ವೇದಾನಂದ ಮೂರ್ತಿಗೆ ಹೇಳೀ, ಅಲ್ಲಿಯ ಲೋಕಲ್‌ ಹೆಲ್ಪ್ ಕಾರ್ತೀಕ್‌ ಅನ್ನುವವರಿಗೆ ಕಾಲ್‌ ಮಾಡಿದೆ.

            ಖಂಡಿತಾ ಬನ್ನಿ ಸರ್.‌ ಫ್ಯಾಮಿಲಿ ಬರುತ್ತೆ ಅಂದ್ರೆ, ಸ್ವಲ್ಪಮುಂಚೆ ಹೋಮ್‌ ಸ್ಟೇಗಳನ್ನು ಬುಕ್‌ ಮಾಡಬೇಕಾಗಿತ್ತು. ಈವಾಗ ಸಿಗೋದು ಕಷ್ಟ. ಬಂದು ಹೋಗಲಿಕ್ಕೆ ಅಡ್ಡಿ ಇಲ್ಲ. ವಾತಾವರಣ ಚೆನ್ನಾಗಿದೆ. ಹಬ್ಬ ಅಂತ ಸುಂಕಸಾಲೆಯಿಂದ ರಾಣಿ ಝರಿವರೆಗಿನ ರಸ್ತೆ ಕೂಡ Open ಮಾಡಿದ್ದಾರೆ. ನೀವು ಬನ್ನಿ ಅಂದ.

            ಇದು ಎರಡನೇ ಪ್ಲಸ್‌ ಪಾಯಿಂಟ್.‌ ಕಾಂಕ್ರೀಟ್‌ ರಸ್ತೆ ಮಾಡುವ ಸಲುವಾಗಿ, ರಾಣಿ ಝರಿವರೆಗಿನ ರಸ್ತೆ ತಿಂಗಳಿಂದ ಬಂದ್ ಮಾಡಿದ್ರು. Open ಆಗದೆ ಹೋಗಿದ್ರೆ, ನಾವು ಅಲ್ಲಿ 4 ವೀಲ್‌ ಡ್ರೈವ್‌ ಇರೋ ಜೀಪನ್ನ ತಗೊಂಡು ತೋಟದೊಳಗಿನ ಕಚ್ಚಾ ರಸ್ತೆಗಳಲ್ಲಿ ಹೋಗಬೇಕಿತ್ತು. ಅದು ಇನ್ನೊಂದು ತರಹದ ADVENTURE ಆಗ್ತಿತ್ತು.

            ಬೆಳಿಗ್ಗೆ 5 ಗಂಟೆಗೆ ಎದ್ದು, ನಾವು ರೆಡಿ ಆದ್ವಿ. ಹಿಂದಿನ ದಿನವೇ ಚಿತ್ರಾನ್ನದ ಹುಳಿ ರೆಡಿ ಮಾಡಿ ಇಟ್ಟಿದ್ರು. ಬೆಳಿಗ್ಗೆ ರಮೇಶ್‌, ಚಿತ್ರಾನ್ನ, ಮೊಸರನ್ನ ರೆಡಿ ಮಾಡಿಕೊಟ್ರು. ಕ್ಯಾಮರಾ ಮ್ಯಾನ್ ಕೂಡ ಬಂದ.‌ ನಾನು, ಸುಮಂತ, ಮಹೇಶ್‌, ರಾಜು (ಕ್ಯಾಮರಾ ಮ್ಯಾನ್)‌ ಬಲ್ಲಾಳ ರಾಯನ ದುರ್ಗದ ಮೇಲೆ ದಾಳಿ ನಡೆಸಲು ಮೂರನೆಯ ಸಲದ ದಂಡ ಯಾತ್ರೆ ಹೊರಟೆವು.

ಬೆಳಗಿನ ಜಾವದ ತಂಪು ವಾತಾವರಣ, ಮಳೆ ಸಣ್ಣಗೆ ಜಿನುಗುತ್ತಿತ್ತು. ಸ್ವೆಟರ್, ಮಫ್ಲರ್‌ ಸುತ್ತಿಕೊಂಡು ಕುಳಿತಿದ್ದೆ. ನನ್ನ ಲಿವೋಸಿನ್‌ inhaler ಜೇಬಿನಲ್ಲೇ ಇಟ್ಟುಕೊಂಡಿದ್ದೆ. ಪ್ರಯಾಣ ಸಾಗಿದ್ದೆ ಗೊತ್ತಾಗಲಿಲ್ಲ. ಬೇಲೂರು, ಮೂಡಿಗೆರೆ, ಬಣಕಲ್‌, ಕೊಟ್ಟಿಗೆಹಾರಕ್ಕೆ ಬಂದ್ವಿ.

ಕೊಟ್ಟಿಗೆ ಹಾರದಿಂದ ಕಳಸ ಹೊರನಾಡು ರಸ್ತೆ, ಅಲ್ಲಿ ದೊಡ್ಡ Arch Board ಹಾಕಿದಾಗೆ ಬಲಗಡೆಗೆ ತಿರುಗಿಕೊಳ್ಳಬೇಕು. ಇಲ್ಲಿಂದ ಸುಂಕಸಾಲೆಗೆ ೧೫ ಕಿಮಿ. ಬೆಟ್ಟಗಳ ಏರಿಳಿತದ ದಾರಿ. ಅಷ್ಟು ಕಷ್ಟದೇನಲ್ಲ. ಅಗೋ ಅಗೋ ಎನ್ನುವಷ್ಟರಲ್ಲಿ ಕೆಳಗೂರು ಬಂದೇ ಬಿಡ್ತು. ಕೆಳಗೂರು ಟೀ ಎಸ್ಟೇಟ್‌ಗೆ ಬಹಳ ಪ್ರಸಿದ್ಧಿ. ಇಲ್ಲಿ ಇರುವ ಕೆಲವು home Stayಗಳಲ್ಲಿ ಟೀ ಎಸ್ಟೇಟ್‌ ವಾಕ್‌ ಕರೆದುಕೊಂಡು ಹೋಗ್ತಾರೆ. ಟೀ ಎಲೆ ಬಿಡಿಸುವುದರಿಂದ ಹಿಡಿದು, ಟೀ ಸೊಪ್ಪು ತಯಾರಿಕೆವರೆಗೆ ಡೆಮೋ ಕೊಡ್ತಾರೆ. ಅದಕ್ಕೋಸ್ಕರ ಸುಮಾರು 300 ರಿಂದ 400 ರೂಫಾಯಿ ಚಾರ್ಜ್‌ ಮಾಡ್ತಾರೆ. ಕೆಳಗೂರಿನಿಂದ ಸುಂಕಸಾಲೆ ಬಹಳ ಹತ್ತಿರ.

ನಿಮಗೆ ಸುಂಕಸಾಲೆ ಬಂದಿದ್ದು ಗೊತ್ತಾಗೋದೇ ಇಲ್ಲ. ಅಲ್ಲಿ ಯಾವ ಊರು ಕಾಣಿಸೋದಿಲ್ಲ. ಎಲ್ಲಾ ಮನೆಗಳೂ ಬೆಟ್ಟದ ಮರೆಯಾಗಿ ಇರ್ತಾವೆ. ಸುಂಕಸಾಲೆಯ ಕಾಫಿ ಪಾಯಿಂಟ್‌ ಒಂದೇ ಎದ್ದು ಕಾಣುವ ಜಾಗ. ರಸ್ತೆ ಬದಿ ಸಿಗುತ್ತದೆ. ಅಲ್ಲಿ ಕಾರ್ತೀಕ ನಮಗಾಗಿ ಕಾಯುತ್ತಿದ್ದ. ಬನ್ನಿ ಸಾರ್‌ ಅಂತ ನಗು ಮೊಗದಿಂದ ನಗ್ತಾ ಸ್ವಾಗತ ಮಾಡಿದ. 35-38 ರ ಆಜುಬಾಜಿನ ತೆಳ್ಳಗಿನ ಎತ್ತರದ ಆಸಾಮಿ, 40 ಆಗಿರಲಿಕ್ಕೂ ಸಾಕು. ವಯಸ್ಸು ಕಾಣುತ್ತಿರಲಿಲ್ಲ. ಟಿಕೆಟ್‌ ತಗೊಳ್ಳುವಾ ಬನ್ನಿ ಅಂತ ಆ ಕಾಫಿ ಪಾಯಿಂಟ್ ಹತ್ರ ಕರೆದುಕೊಂಡು ಹೋದ. ಅಲ್ಲಿ ದೀಪಾವಳಿ ಹಬ್ಬದ ಸಂಭ್ರಮ. ಲಕ್ಷ್ಮೀ ಪೂಜೆ ನಡೆಯುತ್ತಾ ಇತ್ತು. ಪೂಜೆ ಮುಗಿಯುವವರೆಗೆ ಕಾಯಬೇಕು ಅಂದರು. ನೀವು ಪೂಜೆ ಮಾಡಿಕೊಳ್ಳಿ ನಮಗೆ ಟಿಕೆಟ್‌ ಕೊಡಿ ಅಂದೆವು. ಒಬ್ಬ ಚಾರಣಿಗರಿಗೆ 250 ರೂಪಾಯಿ. ಎಲ್ಲರೂ ಟಿಕೆಟ್‌ ತಗೊಂಡು ರಾಣಿ ಝರಿ ವ್ಯೂ ಪಾಯಿಂಟ್‌ ಕಡೆ ಹೊರಟೆವು. ಇಲ್ಲಿಂದ ಸುಮಾರು 7 ಕಿ.ಮೀ. ದೂರ ಪ್ರಯಾಣ ಬಸ್‌ನಲ್ಲಿ ಬಂದ ಚಾರಣಿಗರಿಗೆ ಇಲ್ಲಿ ಆಟೋಗಳು, ಜೀಪ್‌ಗಳೂ ಬಾಡಿಗೆಗೆ ಸಿಗುತ್ತವೆ.

ಸುಂಕಸಾಲೆಯಿಂದ ನಾವು ಹೊರಟುದಾರಿಯಲ್ಲಿ ಸಿಗುವ ಕಾಲಭೈರವೇಶ್ವರನ ಗುಡಿಯ ಹತ್ತಿರ ಬಂದೆವು. ಈ ಗುಡಿಯ ದರ್ಶನ ಮಾಡಿದ ನಂತರವೇ ಟ್ರಿಕ್ಕಿಂಗ್‌ ಶುರು ಎಂದು ಕಾರ್ತಿಕ ಹೇಳಿದ. ಗರ್ಭಗುಡಿಗೆ ಬೀಗ ಹಾಕಿದ್ದರಿಂದ ದೇವಸ್ಥಾನದ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ರಾಣಿಝರಿ ವ್ಯೂ ಪಾಯಿಂಟ್‌ ಗೆ ಬಂದೆವು.

ವ್ಯೂ ಪಾಯಿಂಟ್‌ ಹತ್ತಿರ ಬಂದು ಇಳಿದರೂ    ಎದುರಿಗೆ ಸಣ್ಣ ದಿಬ್ಬವೊಂದು ಹೊರತು ಪಡಿಸಿ ಬೇರೆ ಏನೂ ಕಾಣುವುದಿಲ್ಲ. ಅಸಲೀ ದೃಶ್ಯ ನೋಡಬೇಕೆಂದರೆ ಈ ಸಣ್ಣ ದಿಬ್ಬವನ್ನು ಹತ್ತಬೇಕು. ಸುಮಾರು ನೂರಿಪ್ಪತ್ತು ಹೆಜ್ಜೆ ಇಡುವಷ್ಟರಲ್ಲಿ ಧುತ್ತೆಂದು ಪ್ರಪಾತ ನಮ್ಮ ಕಣ್ಣೆದುರು ನಿಲ್ಲುತ್ತದೆ. ರಾಣಿ ಝರಿ ಬೆಟ್ಟ ನಮ್ಮನ್ನೇ ದಿಟ್ಟಿಸಿ ನೋಡುತ್ತದೆ. ಮರಗಿಡಗಳನ್ನು ಹಾಸು ಹೊದ್ದಿರುವ ಕಣಿವೆ ಮಗ್ಗಲು ಬದಲಾಯಿಸುತ್ತದೆ.

ಪ್ರಪಾತದ ಅಂಚಿಗೆ ನಿಂತಾಗ ಬೀಸುವ ಜೋರುಗಾಳಿ ನಮ್ಮನ್ನು ಆಚೀಚೆ ಅಲ್ಲಾಡಿಸಿಬಿಡುತ್ತದೆ. ಉಸಿರುಗಟ್ಟಿಸುವ ದೃಶ್ಯ. ಇಲ್ಲಿಯವರೆಗೆ ನಾನು ಮತ್ತು ಮಹೇಶ ಈ ಹಿಂದೆ  ಬಂದಿದ್ದೆವು. ತಮಾಷೆ ಎಂದರೆ ಸುಮಂತನೂ ಬಂದಿದ್ದನಂತೆ. ಆ ಜಾಗ ನೋಡಿದಾಗ ಅವನಿಗೆ ತಾನು ಕಾಲೇಜ್‌ ಡೇಸ್‌ ನಲ್ಲಿ ಟ್ರಿಕ್ಕಿಂಗ್‌ ಅಂತ ಬಂದಿದ್ದು ನೆನಪಿಗೆ ಬಂತು.

ಸ್ವಲ್ಪ ಹೊತ್ತು ಅಲ್ಲಿ ಅಡ್ಡಾಡಿ, ಎಷ್ಟು ಸಾಧ್ಯ ಅಷ್ಟು ಹೊತ್ತು ಪ್ರಪಾತವನ್ನೇ ನೊಡುತ್ತಾ. ಆ ಭೀಕರತೆಯನ್ನು ಮೈ ನಡುಕಗೊಳಿಸಿಕೊಳ್ಳುವಲ್ಲಿ ಪರ್ಯಾಪ್ತಗೊಳಿಸುತ್ತಾ ನಾನು ಕೇಳಿದೆ.

“ ಅಲ್ಲಿ ಕೆಲವು ಜನ ಚುಕ್ಕಿಗಳ ತರಾ ಕಾಣಿದ್ತಾ ಇದ್ದಾರಲ್ಲ, ಅದೇ ಬೆಟ್ಟದ ಮೇಲೆನಾ ನಾವೂ ಹೋಗೋದು” ಅಂತ. ಕಾರ್ತಿಕ್‌ ಹೇಳಿದ “ ಇಲ್ಲಾ ಸರ್‌, ಅದು ರಾಣಿ ಝರಿ ಬೆಟ್ಟ, ಸೀನರಿ ನೋಡೋಕೆ ಅಲ್ಲಿ ಹತ್ತುತ್ತಿದ್ದಾರೆ. ನಾವು ಹೋಗಬೇಕಿರುವುದು ಈ ಕಡೆ ಇದೆ. ಅಗೋ ಅಲ್ಲಿ ಬೆಟ್ಟದ ತುದಿಯಲ್ಲಿ ಕೋಟೆ ಕಾಣಿಸ್ತಾ ಇದೆ ನೋಡಿ ಆ ತುದಿಗೆ ಹೋಗಬೇಕು” ಎಂದು ಕೈ ತೋರಿಸಿದ.

ಸುಮಾರು 1500ಮಿಟರ್‌ ಎತ್ತರದ ಪರ್ವತ ತನ್ನ ಶಿಖರದಲ್ಲಿ ಕಿರೀಟದಂತೆ ಕೋಟೆಯನ್ನು ಇಟ್ಟುಕೊಂಡು ನಮ್ಮನ್ನು ಕರೆಯುತ್ತಿತ್ತು.

ಇಲ್ಲಿಂದ ಟ್ರೆಕ್ಕಿಂಗ್‌ ನಾಲ್ಕು ಹಂತದಲ್ಲಿ ಆಗುತ್ತದೆ. ಮೊದಲನೇ ಹಂತ: ಅರಣ್ಯ ಪ್ರದೇಶವೊಂದರ ಒಳಗೆ ಹೋಗುವುದು, ಎರಡನೇ ಹಂತದಲ್ಲಿ: ಹುಲ್ಲುಗಾವಲು ಪ್ರದೇಶದ ನಡಿಗೆ, ಮೂರನೇ ಹಂತ: ಅರಣ್ಯ ಪ್ರದೇಶ ಎರಡರ ಒಳಗೆ ನಡೆಯುವುದು. ನಾಲ್ಕು ಮತ್ತು ಅಂತಿಮ ಹಂತದಲ್ಲಿ, ದುರ್ಗದ ಕೋಟೆಯ ತುದಿ ತಲುಪುವುದು.

            ಮೊದಲ ಹಂತವಾದ ಅರಣ್ಯ ಪ್ರದೇಶದಲ್ಲಿ, ಗಿಡಮರಗಳು ಒತ್ತೊತ್ತಾಗಿ ಬೆಳೆದಿದ್ದುದರಿಂದಲೂ ಬೆಳಗಿನ 9 ಗಂಟೆಯಲ್ಲಿ ನಮ್ಮ ನಡಿಗೆ ಆರಂಭಿಸಿದ್ದರಿಂದ ತಣ್ಣಗಿನ ವಾತಾವರಣದ ನಡಿಗೆ ಹಿತವಾಗಿತ್ತು. ಸಣ್ಣ ದಾರಿ, ಅಲ್ಲಲ್ಲಿ ಉರುಳಿ ಬಿದ್ದ ಮರಗಳೂ, ಕೆಲವು ಕಡೆ land slide ಆದ ಗುರುತುಗಳೂ, ಆವಾಗ ಈವಾಗ ಸಣ್ಣದಾಗಿ ಹರಿಯುವ ನೀರಿನ ಝರಿಯ ಶಬ್ದ ಮನಸ್ಸಿಗೆ ಮುದ ಕೊಡುತ್ತಿತ್ತು. ಅಷ್ಟೇನೂ ಕಡಿದಾದ ದಾರಿ ಆಗಿರಲಿಲ್ಲವಾದ ಕಾರಣ ನಾವೂ ಹುಮ್ಮಸ್ಸಿನಿಂದಲೇ ನಡೆಯ ತೊಡಗಿದೆವು. ಜೊತೆಗೆ ಕಾರ್ತೀಕನ ನಿರಂತರ ಮಾತು, ಹಾಸ್ಯ. ದಾರಿ ಹೋದದ್ದೇ ತಿಳಿಯುತ್ತಿರಲಿಲ್ಲ.

ಅವನ ಪ್ರಕಾರ ಆ ರಾಣಿ ಝರಿ ಪ್ರಪಾತದಲ್ಲಿ ಬಲ್ಲಾಳ ರಾಯನ ರಾಣಿಯವರು ಹಾರಿ ಪ್ರಾಣ ಕಳೆದುಕೊಂಡಿದ್ದರಂತೆ. ಮುಸ್ಲಿಮ್‌ರ ದಾಳಿಯನ್ನು ತಪ್ಪಿಸಿಕೊಳ್ಳಲಿಕ್ಕೆ ಹಾಗೆ ಮಾಡಿದರಂತೆ.

ಹಾಗೇ ನೋಡಿದರೆ, ಹೊಯ್ಸಳರ ಇತಿಹಾಸದಲ್ಲಿ ಎಲ್ಲಿಯೂ ನನಗೆ ಈ ಬಲ್ಲಾಳರಾಯನ ದುರ್ಗದ ಉಲ್ಲೇಖ ಬಂದಿದ್ದು ನೆನಪಿಗೆ ಬರಲಿಲ್ಲ. ಕೆಲವಾರು ಪುಸ್ತಕಗಳನ್ನು ತಿರುವಿ ಹಾಕಿದೆ. ಮೂರನೇ ಬಲ್ಲಾಳ ನ ಬಗ್ಗೆ ಡಾ. ಎನ್‌ ಸಾವಿತ್ರಿ ಯವರು ಬರೆದ ಸಂಶೋಧನಾ ಪ್ರಬಂಧದಲ್ಲೂ ಈ ದುರ್ಗದ ಬಗ್ಗೆ ಮಾತಿಲ್ಲ. ಒಂದನೇ ಬಲ್ಲಾಳನ ನಂತರ ವಿಷ್ಣುವರ್ಧನ ಜನಪ್ರಿಯ ರಾಜನಾಗುತ್ತಾನೆ. ನಂತರ ಅವನ ಮೊಮ್ಮಗ ಎರಡನೇ ಬಲ್ಲಾಳ ಅಷ್ಟೇ ಜನಪ್ರಿಯನಾಗುತ್ತಾನೆ. ಅವನ ರಾಣಿ ಉಮಾದೇವಿ ಬೆಳಗುತ್ತಿಯ ದಂಗೆಯನ್ನು ಸೇನೆಯ ನೇತೃತ್ವವನ್ನು ತಾನೇ ವಹಿಸಿ ಗೆಲ್ಲುತ್ತಾಳೆ. ಹಾಗೆಯೇ ಮೂರನೇ ಬಲ್ಲಾಳ ಹೊಯ್ಸಳರ ಕೊನೆಯ ಸಮರ್ಥ ದೊರೆ, ಯುದ್ದಗಳಲ್ಲಿಯೇ ಕಾಲಕಳೆಯಬೇಕಾದ ಸ್ಥಿತಿ ಇವನದ್ದು. ಇವನ ರಾಣಿ ಚಿಕ್ಕಾಯಿತಾಯಿ ತುಳು ನಾಡಿನ ಅಧಿಪತ್ಯ ವಹಿಸಿಕೊಂಡು, ಬಲ್ಲಾಳನ ಪರವಾಗಿ ಆಳುತ್ತಾಳೆ. ನನಗೆ ಅನ್ನಿಸುವ ಮಟ್ಟಿಗೆ ರಾಣಿ ಉಮಾದೇವಿ ಆಥವಾ ರಾಣಿ ಚಿಕ್ಕಾಯಿ ತಾಯಿ ಈ ಕೋಟೆಯನ್ನು ಕಟ್ಟಿರಬೇಕೆಂದು ತೋರುತ್ತದೆ.

            ಸುಮಾರು ಮುಕ್ಕಾಲು ಕಿಲೋ ಮೀಟರ್‌ ದಾರಿ ಕ್ರಮಿಸುವಾಗ ನಮಗೆ ನಿಧಾನವಾಗಿ ಏದುಸಿರು ಬರಲು ಪ್ರಾರಂಭವಾಯಿತು. ಕಾರ್ತೀಕನ ವಾಗ್‌ ಝರಿಗೆ ಹ್ಞಾ!ಹೂ! ಅನ್ನಲೂ ಕಷ್ಟವಾಗತೊಡಗಿತು. ಬ್ಯಾಗ್‌ನಲ್ಲಿದ್ದ ಆರೆಂಜ್‌ ಜ್ಯೂಸ್‌ ತೆಗೆದುಕೊಂಡು, ಒಂದು ಕಡೆ ಕುಳಿತು ಕುಡಿದೆವು. ನೀರಿನ ಬಾಟಲ್‌ನಲ್ಲಿ ಗ್ಲುಕೋನ್‌ ಡಿ ಪೌಡರ್‌ ಹಾಕಿ ಬೇಕಾದಾಗ ಕುಡಿಯುವಂತೆ ಹೇಳಿ ಕೊಟ್ಟ ಮಹೇಶ್.‌ ನಾವಾದರೋ ಷೂ ಹಾಕಿಕೊಂಡಿದ್ವಿ. ಅವನು ಬರೀ ಚಪ್ಪಲಿಯಲ್ಲೇ ಬಂದಿದ್ದ. ನನಗೆ ಷೂ ಒಗ್ಗೋಲ್ಲ ಅಂದಿದ್ದ. ಕಾಫಿ ತೋಟದಲ್ಲಿ ಬರಿಗಾಲಲ್ಲೇ ನುಗ್ಗಿ ಓಡಾಡ್ತಾನೆ ಅವನು. ಷೂ ಹಾಕುವುದು ಅಂದರೆ ಮಹೇಶನಿಗೆ ಕಾಲುಕಟ್ಟಿ ಹಾಕಿಕೊಂಡಂತೆ.

ಈ ಪ್ರದೇಶದಲ್ಲಿಯೇ ರಾಕಿ ಫೇಸ್ ಒಂದು ಸಿಗುತ್ತದೆ. ಎತ್ತರವಾದ ಬಂಡೆ ಅದನ್ನು ಹತ್ತಿ ಹೋಗಬೇಕು. ನೇರವಾಗಿ ಹತ್ತಬೇಕು ಎಂದೇನಿಲ್ಲ. ಬಂಡೆಯ ಪಕ್ಕದಲ್ಲಿಯೇ ಕಲ್ಲುಗಳನ್ನು ಹೇಗೆಂದರೆ ಹಾಗೆ ಜೋಡಿಸಿ ಮೆಟ್ಟಿಲು ತರಾ ಮಾಡಿದ್ದಾರೆ. ಕಾಲು ಎತ್ತಿ ಎತ್ತಿ ಹಾಕಿ ಹತ್ತಬೇಕು ಸ್ವಲ್ಪ ಉಸಿರು ಹಿಡಿಯುತ್ತದೆ. ಹಾಗೆ ಬಂಡೆ ಹತ್ತ ಬೇಕಾದರೆ ಅಲ್ಲಿ ತೆಳ್ಳಗೆ ಹರಿಯುವ ನೀರಿನ ಧಾರೆಯೊಂದು ಕಾಣಿಸಿತು. ಯಾರೋ ಪುಣ್ಯಾತ್ಮರು‌ ಕತ್ತಾಳೆ ಪಟ್ಟಿಯ ಚೂರೊಂದನ್ನು ಆ ನೀರಿನ ಚಿಲುಮೆಗೆ ಜೋಡಿಸಿದ್ದರು. ಶುದ್ಧ ಸ್ಪಟಿಕದಂತಹ ನೀರು ಇಳಿಯುತ್ತಿತ್ತು. ಬೆಟ್ಟ ಹತ್ತಿ ಬಿಡುವ ತವಕದಲ್ಲಿ ನಾವು ಅಲ್ಲಿ ನಿಲ್ಲಲಿಲ್ಲ. ದಾಟಿ ಮೇಲೆ ಬಂದ್ವಿ. ಮೊದಲ ಕಾಡಿನಿಂದ ಆಚೆ ಬಂದಾಗ ಕಂಡಿದ್ದು, ಹಸಿರು ಹುಲ್ಲುಗಾವಲು. ಇಲ್ಲಿಂದ ಕೋಟೆ ಮತ್ತಷ್ಟು ಹತ್ತಿರವಾಗಿ ಕಾಣತೊಡಗಿತು. ಬಿಸಿಲು ಚುರು ಚುರು ಅನ್ನುತ್ತಿತ್ತು. ಕ್ಯಾಪ್‌ ತಂದಿದ್ದರೂ ಅದನ್ನು ಹಾಕಿಕೊಳ್ಳಲು ಯಾರಿಗೂ ನೆನಪೇ ಬರಲಿಲ್ಲ. 

ಹಾಗೆ ನಡೆಯುತ್ತಾ ಎರಡನೇ ಅರಣ್ಯ ಪ್ರದೇಶದ ಒಳಗೆ ಬಂದೆವು. ಇದು ಮೊದಲ ತರಹದ ಕಾಡೇ. ಆದರೆ ಸ್ವಲ್ಪ ಹೆಚ್ಚು ಏರು ದಾರಿ steep ಆಗಿದೆ. ಜೊತೆಗೆ ನಡೆಯುವ ಹಾದಿ ಕೂಡ ಕಿರಿದಾಗಿದೆ. ಇಲ್ಲಿ ನಡೆಯುವಾಗ ಆದಷ್ಟು ನಮ್ಮ ಬಲಬದಿಯಲ್ಲಿ ನಡೆಯುವುದು ಉತ್ತಮ. ಎಡ ಬದಿಯಲ್ಲಿ ಹಸಿರು ನೋಡಿ ಹೆಜ್ಜೆ ಇಟ್ಟರೆ, ಕಣಿವೆಗೆ ಜಾರುವ ಅಪಾಯ ಜಾಸ್ತಿ. ಹತ್ತಿಪ್ಪತ್ತು ಅಡಿ ಆಳಕ್ಕೆ ಬೀಳುವ ಸಾಧ್ಯತೆಗಳಿವೆ. ಸ್ವಲ್ಪ ಎಚ್ಚರಿಕೆಯಿಂದ ನಡೆಯಬೇಕು.

ಈ ಕಾಡಿನಲ್ಲಿ ನೀರಿನ ಸಣ್ಣ ಕಾಲುವೆ ಇದೆ. ಆ ನೀರು ಎಷ್ಟು ತಣ್ಣಗಿರುತ್ತೆ ಅಂದರೆ, ಕೈ ಬೆರಳು ಸೋಕಿದರೆ ಮರಗಟ್ಟುವ ಹಾಗೆ.

ಅಡ್ಡಲಾಗಿ ಉರುಳಿ ಬಿದ್ದಿದ್ದ ಮರಗಳನ್ನು ದಾಟಿ, ಕುಳಿತು ನಿಂತು,ಸುಧಾರಿಸಿಕೊಂಡು ಈ ಕಾಡಿನಿಂದಲೂ ಈಚೆ ಬಂದೆವು. ಹಸಿರು ಹುಲ್ಲುಗಾವಲು ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು. Shola grass lands ಎಂದು ಜರ್ಮನಿಯಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಹಸಿರು ದಿಬ್ಬಗಳು ನಮ್ಮ ದೇಶದಲ್ಲೂ ಇರುವುದನ್ನು ನೋಡಿ ನಮ್ಮ ದೇಶ ಯಾವುದಕ್ಕೂ ಕಮ್ಮಿಯಿಲ್ಲ ಎಂದು ಹೆಮ್ಮೆಯಾಯಿತು. ಕಾಲು ದಾರಿಯಲ್ಲಿ ಅಡ್ಡ ಬಂದ ಬಂಡೆಗಳನ್ನು ದಾಟಿಕೊಂಡು ದುರ್ಗದ ಕೋಟೆಯ ಹತ್ತಿರ ಬಂದು ನಿಂತೆವು. ಇಲ್ಲಿಂದ ಸುತ್ತ ಕಣಿವೆಯ ವಿಹಂಗಮ ದೃಶ್ಯ ಮನ ತಣಿಸುತ್ತದೆ. ಕರಾವಳಿ, ಪಶ್ಚಿಮ ಘಟ್ಟಗಳ ಶಿಖರಗಳ ಸಾಲು ಸಾಲು ಕಣಿವೆ ಪ್ರದೇಶ, ಉದ್ದಕ್ಕೂ ಹಾಸಿ ಮಲಗಿರುವ ಅರಣ್ಯ, ಹುಲ್ಲುಗಾವಲುಗಳು ವೈವಿಧ್ಯತೆಯ ಆಗರ. ತಿಳಿ ನೀಲಿ   ಆಕಾಶ. ಅಲ್ಲಲ್ಲಿ ತೇಲುವ ಬಿಳಿ ಮೋಡಗಳ ಚಿತ್ತಾರ ಬರದಂತೆ ಕಾಣುತ್ತಿದ್ದವು.

            ಬೆಳಿಗ್ಗೆ 6 ಕ್ಕೆ ಮನೆ ಬಿಟ್ಟವರು ಏನೇನೂ ತಿಂದಿರಲಿಲ್ಲ. ಆದರೂ ಇಲ್ಲಿ ತಿಂಡಿ ತಿನ್ನುವ ಹಸಿವು ಯಾರಿಗೂ ಆಗಿರಲಿಲ್ಲ. ಪ್ರಕೃತಿಯ ಸೌಂದರ್ಯದ ಸೊಬಗು ನಮ್ಮ ಕಣ್ಣಿಗೆ ಸಂತೋಷ ನೀಡಿದ್ದಲ್ಲದೆ ನಮ್ಮ ಹೊಟ್ಟೆಯನ್ನೂ ಸಹ ತುಂಬಿಸಿ ಬಿಟ್ಟಿತ್ತು. ಅದುವರೆಗಿನ ಆಯಾಸ ಕ್ಷಣ ಮಾತ್ರದಲ್ಲಿ ಕಡಿಮೆಯಾಯಿತು.

ಇಲ್ಲಿಂದ ಮತ್ತೆ ಮೂರೂವರೆ ಕಿಮೀ, ಪಶ್ಚಿಮಾಭಿಮುಖವಾಗಿ ನಡೆದರೆ , ಬಂಡಾಜೆ ಫಾಲ್ಸ್‌ ಹತ್ತಿರ ಹೋಗಬಹುದು. ಈ ಜಲಪಾತದ ಮೇಲ್ತುದಿಯಲ್ಲಿ ನಾವಿರುತ್ತೇವೆಯಾಗಿ ನಮಗೆ ಅದರ ಆಳ ಗೊತ್ತಾಗುವುದಿಲ್ಲ. ಪ್ರಪಾತದೆಡೆ ಸಾಹಸ ಮಾಡಿ ಬಗ್ಗಿ ನೋಡಿದರೆ, ಆ ಜಲಪಾತ 1000 ಅಡಿಗಳಷ್ಟು ಕೆಳಗೆ ಧುಮುಕುವುದು ಗೋಚರವಾಗುತ್ತದೆ. ಬಂಡೆಯ ಅಂಚಿಗೆ ತೆವಳಿಕೊಂಡು ಹೋಗಿ, ಮತ್ತೊಬ್ಬರು ಕಾಲುಗಳನ್ನು ಹಿಡಿದುಕೊಂಡಿದ್ದರೆ ಒಳ್ಳೆಯದು. ತಲೆತಿರುಗಿ ಮುಂದಕ್ಕೆ ವಾಲಿದಲ್ಲಿ ನೀರಿಗಿಂತ ವೇಗದಲ್ಲಿ ತಳ ಸೇರುವುದು ಖಚಿತ! ಇಲ್ಲಿ ಬಹಳಷ್ಟು ಜನ ಕ್ಯಾಂಪ್‌ ಮಾಡುತ್ತಾರೆ. ಅರಣ್ಯ ಇಲಾಖೆಯಿಂದ ಅನುಮತಿ ಅಗತ್ಯ.

ನಾವು ಬಂಡಾಜೆ ಫಾಲ್ಸ್‌ ಗೆ ಹೋಗುವುದು ಬೇಡ ಎಂದು ಮೊದಲೇ ನಿರ್ಧರಿಸಿದ್ದೇವು. ಹೇಳಬೇಕೆಂದರೆ, ದುರ್ಗವನ್ನು ತಲುಪುತ್ತೇವೆಯೋ ಇಲ್ಲವೋ ಎನ್ನುವ ಅನುಮಾನವಿತ್ತು ನಮಗೆ.

ಕಾರ್ತೀಕ    “ಕೆಳಗೆ ದುರ್ಗ ಪರಮೇಶ್ವರಿ ಫಾಲ್ಸ್‌ ಇದೆ ಸರ್.‌ ಅಲ್ಲಿಗೆ ಹೋಗೋಣ, ತಿಂಡಿ ಅಲ್ಲೇ ಮಾಡಲಿಕ್ಕೆ ಚೆನ್ನಾಗಿರುತ್ತೆ” ಅಂದ. ಬಂಡಾಜೆ ಫಾಲ್ಸ್‌ ಗೆ ಹೋಗುವುದು ಬೇಡ ಅಂತ ನಾವು ಈ ಮೊದಲೇ ತೀರ್ಮಾನ ಮಾಡಿದ್ವಿ. ಅಲ್ಲಿ ಹೋಗುವುದಿದ್ದರೆ camp ಮಾಡಲು ಹೋಗುವುದು ಚಂದ ಅಂತ ಉಳಿದವರೂ ಹೇಳಿದ್ದರು. ಸಾವಿರ ಅಡಿ ಧುಮುಕುವ ಬಂಡಾಜೆ ಫಾಲ್ಸ್‌ ತುದಿಗೆ ಹೋಗುವ ಬದಲು, ಐವತ್ತು ಅಡಿಯಿಂದ ಧುಮುಕುವ ದುರ್ಗೆ ಫಾಲ್ಸ್‌ ಹತ್ತಿರ ಹೋಗಲು ತೀರ್ಮಾನ ಮಾಡಿ, ಬೆಟ್ಟ ಇಳಿಯಲು ಶುರು ಮಾಡಿದೆವು.

ಎದುರಾಗಿ ಸಿಕ್ಕವರು ಬೆಟ್ಟ ಏರುತ್ತಿದ್ದವರು, ಇನ್ನು ಎಷ್ಟು ದೂರ ಅಂತ ಕೇಳುತ್ತಿದ್ದರೆ, ನಮಗೆ ತುಟಿಯಂಚಿನಲ್ಲಿ ಸಣ್ಣ ಕಿರುನಗೆ. ಹತ್ತಿ ಇಳಿಯುತ್ತಿರುವ ಸಂತಸ.

ಹೇ ಜಾಸ್ತಿ ದೂರವಿಲ್ಲ, ಹತ್ತಿ ಹತ್ತಿ ಎಂದು ಅವರನ್ನು ಹುರಿದುಂಬಿಸುತ್ತಾ ಕಳಿಸುತ್ತಿದ್ದೆವು. ವಯಸ್ಸಾದ ಅಜ್ಜಿ, ಪುಟ್ಟ ಮಗು ಬೆಟ್ಟ ಹತ್ತುತ್ತಿದ್ದನ್ನು ನೋಡಿದಾಗ, ನಾವೂ ನಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದದಿತ್ತಲ್ಲ್ಲವೇ ಅನ್ನಿಸಿತು. ಆದರೆ ಆ ಮೊಮ್ಮಕ್ಕಳು ಕೊಡುವ ಕಾಟ ನೆನಸಿಕೊಂಡಾಗ, ಅದು ಸಾಧ್ಯವೇ ಇಲ್ಲ ಅನ್ನಿಸಿತ್ತು.

            ದುರ್ಗ ಫಾಲ್ಸ್‌ ಹತ್ತಿರ ಬಂದೆವು. ದಂಡಿ ದಂಡಿ ಫ್ಯಾಮಿಲಿಗಳೂ ಅಲ್ಲಿ ನೆರೆದಿದ್ದವು. ಟೆಂಪೋಗಳಲ್ಲಿ ಜನ ಬಂದಿದ್ದರು. ಜಲಪಾತ ಬೀಳುವ ಮೇಲಿನ ಪ್ರದೇಶದಲ್ಲಿ ಸಣ್ಣ ಬಂಡೆಗಳ ನಡುವೆ ಧುಮುಕುವ ನೀರು ಅತ್ಯಾಕರ್ಷಕವಾಗಿ ಕಂಡರೂ, ಆ ಜನರನ್ನು ನೋಡಿ ಅಲ್ಲಿ ಇಳಿಯದೆ, ಜಲಪಾತದ ನೀರು ಕೆಳಗೆ ಬೀಳುವ ಕಡೆ ಬಂದೆವು. ಅಲ್ಲಿ ಬಂಡೆಗಳ ಮೇಲೆ ಕುಳಿತು, ನೀರಾಟ ಆಡಿದೆವು.

ನಂತರ ನಾವು ತಂದಿದ್ದ ಚಿತ್ರಾನ್ನ ಮೊಸರನ್ನ ತಿಂದೆವು. ಈ ಜಲಪಾತದ ನಿರಂತರ ಭೋರ್ಗರೆತದ ಶಬ್ದ. ಕಾಲಡಿಯ ಸಣ್ಣಗೇ ಜುಳು ಜುಳು ನೀರು, ಕೈಯಲ್ಲಿ ಅಮೃತಕ್ಕೆ ಸಮನಾದ ಅನ್ನ, ಹೊಟ್ಟೆ ತುಂಬಾ ತಿಂದೆವು. ನಿಜ ಹಸಿವು ಅಂದರೆ ಏನು ಅಂತ ಗೊತ್ತಾಗಿದ್ದು ಆಗಲೇ.

ಅಷ್ಟು ಹೊತ್ತಿಗೆ ಕಪ್ಪು ಮೋಡಗಳೂ, ಮಧ್ಯಾಹ್ನವನ್ನೇ ಸಂಜೆ ಮಾಡಿದ್ದವು. ಮಳೆ ನೀರಿನ ಒಂದೆರಡು ಹನಿಗಳೂ ಟಪ್‌ ಟಪ್‌ ಅಂತ ಬೀಳಲು ಪ್ರಾರಂಭವಾಯಿತು. ದಡಬಡಾಯಿಸಿ ಎದ್ದು ಕಾರಿನ ಕಡೆಗೆ ನಡೆಯ ತೊಡಗಿದೆವು. ಸುಂಕಸಾಲೆಗೆ ಬಂದು ಕಾರ್ತೀಕನನ್ನು ಇಳಿಸಿ ಧನ್ಯವಾದಗಳನ್ನು ತಿಳಿಸಿ ಮನೆಯ ಕಡೆ ಕಾರು ತಿರುಗಿಸಿದಾಗ ಹೊಯ್ಸಳರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗಿ ಬಲ್ಲಾಳರಾಯನ ದುರ್ಗವನ್ನು ವಶಪಡಿಸಿಕೊಂಡ ಭಾವ.

            ಏನೇ ಆಗಲಿ, ನಾವು ಎಷ್ಟು ಸಣ್ಣವರು ಎಂದು ತಿಳಿದುಕೊಳ್ಳಬೇಕೆಂದರೆ ನಾವು ಹೆಚ್ಚು ಹೆಚ್ಚು ಎತ್ತರಕ್ಕೆ ಬೆಳೆಯಬೇಕು ಅಲ್ಲವೇ.

ಆಲ್ಫ್ ಮತ್ತು ಸರೋವರಗಳ ನಡುವೆ (2/7)

ಹ್ಯೂ ಯಾನ್ ಶೀನ್ ಕ್ಯಾಸಲ್

ಮಾರನೇ ದಿನ Neuschwanstein castle ಗೆ ಭೇಟಿ. ಅದನ್ನು ಹೇಳುವ ರೀತಿ ಹ್ಯೂ ಯಾನ್ ಶೀನ್ ಕ್ಯಾಸಲ್ ಅಂತ. ಬವೇರಿಯಾದ ರಾಜ ಲ್ಯೂಡ್ ವಿಗ್ ಇದನ್ನು ಕಟ್ಟಿಸಿದ. ಅವನು ಬವೇರಿಯ, ಆಸ್ಟ್ರಿಯಾ,ಮತ್ತು ವೆನಿಸ್ ಗಳನ್ನು ಆಳಿದವನು. ಇದನ್ನು ಅವನು ತನ್ನ ಸ್ವಂತ ಹಣದಿಂದ ಕಟ್ಟಿಸಿದನೆಂದು ಮತ್ತು ಸರ್ಕಾರದ ಬೊಕ್ಕಸದಿಂದ ಹಣ ಪಡೆಯಲಿಲ್ಲವೆಂದು ಅಲ್ಲಿಯವರು ತಿಳಿಸಿದರು. ಹ್ಯಾರಿಪಾಟರ್ ಚಿತ್ರಗಳಲ್ಲಿ ಬರುವ ಕೋಟೆಗಳಂತೆ ಕಾಣುತ್ತಿದ್ದ ಈ ಕ್ಯಾಸಲ್ ಅನ್ನು  ಒಂದು ಸೊಗಸು. ಹತ್ತೊಂಬತ್ತನೇ ಶತಮಾನದ ವಾಸ್ತು ಶಿಲ್ಪ ವನ್ನು ಹೊಂದಿದ್ದ ಈ ಕೋಟೆಯನ್ನು ರೋಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕೊಳವೆಯಂತಹ ನಿಡಿದಾದ ಟವರ್ ಗಳು. ಅವಕ್ಕೆ ಟೋಪಿಗಳಂತೆ ಹೊದಿಸಿದ ಚೂಪಾದ ಮೇಲ್ಛಾವಣಿಗಳು. ಕಿಂಗ್ ಲುಡ್ವಿಗ್ ತನ್ನ ಸ್ವಂತ ಬಳಕೆಗಾಗಿ ಇದನ್ನು ಕಟ್ಟಿಸಿದರೂ ಅವನು ಇದರಲ್ಲಿ ಕೇವಲ ಹನ್ನೊಂದು ರಾತ್ರಿಗಳನ್ನು ಅಷ್ಟೇ ಕಳೆಯಲು ಸಾಧ್ಯವಾಯಿತು ಎಂದು ಹೇಳುತ್ತಾರೆ.ಅಲ್ಲಿಯೇ ದೂರದಲ್ಲಿ ಇವನೇ ಕಟ್ಟಿಸಿದ ಮತ್ತೊಂದು ಕ್ಯಾಸಲ್ ಇತ್ತು. ಅದರ ಹೆಸರು Hohenshwango. Alps ಪರ್ವತಗಳ ಮಡಿಲಲ್ಲಿ ಈ ಕೋಟೆಗಳಿವೆ. ಬೆಟ್ಟದ ಮೇಲೆ ಹೋಗಲು ಕುದುರೆ ಗಾಡಿಗಳಿದ್ದವು. ಆ ಕುದುರೆಗಳು ಹೇಗಿದ್ದವು ಅಂತೀರಿ. ಒಂದೊಂದು ಆನೆಯ ತರ. ಮೇಲೆ ಹೋಗಲು ಬಸ್ಸುಗಳು ಇದ್ದವು. ನಡೆದುಕೊಂಡೂ ಹೋಗಬಹುದು. 20 ನಿಮಿಷಗಳ ವಾಕ್. ಅಲ್ಲಿ ರಶ್ ಇದ್ದಿದ್ದರಿಂದ ನಾವು ಹತ್ತಿರದಲ್ಲಿ ಇದ್ದ Tegelbergbahn ಎಂಬ ಸ್ಥಳಕ್ಕೆ ಹೋದೆವು.

ಕೇಬಲ್ ಕಾರ್ ನಲ್ಲಿ ಮೇಲೆ ಹೋಗಬೇಕು. ಅಲ್ಲಿಂದ ಆಲ್ಫ್ಸ್ ಬೆಟ್ಟಗಳ ಸಾಲು ನಯನ ಮನೋಹರವಾಗಿ ಕಾಣುತ್ತದೆ. ಜರ್ಮನಿ ಮತ್ತು ಆಸ್ಟ್ರಿಯಾ ಗಳನ್ನು ಈ ಪರ್ವತದ ಸಾಲು ಬೇರೆ ಮಾಡುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 250 ಕಿಮೀ ಅಗಳಕ್ಕೆ 1200 ಕಿಮೀ ಉದ್ದಕ್ಕೆ ಚಾಚಿಕೊಂಡಿರುವ ಆಲ್ಫ್ಸ್ ಪರ್ವತ ಶ್ರೇಣಿ 8 ದೇಶಗಳಲ್ಲಿ ಹರಡಿ ಹೋಗಿದೆ. ನಾವು hill top ನಲ್ಲಿಯೇ ಲಂಚ್ ಮುಗಿಸಿ ಕೊಂಡೆವು. ನಂತರ Hohenshwango ಕ್ಯಾಸಲ್ ಗೆ ಮರಳಿ ಬಂದೆವು. ಈಗ ರಶ್ ಕಡಿಮೆ ಇತ್ತು. ಬಸ್ ಹತ್ತಿ ಮೇಲೆ ಹೋದೆವು. ದಾರಿಯಲ್ಲಿ Marien Brook ಎನ್ನುವ ಬ್ರಿಡ್ಜ್ ಇದೆ. ಇಲ್ಲಿಂದ waterfall ತುಂಬಾ ಚೆನ್ನಾಗಿ ಕಾಣುತ್ತದೆ. Scwangau ಎಂದು ಕರೆಯುವ ಈ ಜಾಗ ಸೌಂದರ್ಯಕ್ಕೆ ಹೆಸರಾಗಿದೆ. ಇಲ್ಲಿ ಜನ ಜನ ಜನ.. ಅಲ್ಲಿಂದ ಕೋಟೆಗೆ ಹೋದೆವು. ಈ ಕೋಟೆ ಒಂದು ಎಂಜಿನೀಯರಿಂಗ್ ಕೌಶಲಕ್ಕೆ ಹೆಸರುವಾಸಿಯಾಗಬಲ್ಲ ಕಟ್ಟಡ. 

ಕೆಳಗೆ ಇಳಿಯಲು ಆನೆಯಂಥಹ ಕುದುರೆಗಳು ಎಳೆಯುವ ಗಾಡಿಗಳನ್ನು ಹತ್ತಿದೇವು. ವಾಪಸ್ ಕಾಫ್ ಬರ್ನ್ ಗೆ ಬರುವಾಗ ಒಂದು ಇಂಡಿಯನ್ ಹೋಟೆಲ್ ನಲ್ಲಿ ಊಟ ಮಾಡಿದೆವು. ನಮಸ್ತೆ ಎಂದು ಅದರ ಹೆಸರು. ಇಶಾನ್ ಎಂದು ಮಾಲೀಕನ ಹೆಸರು. ಅವನು ಮುಂಬೈ ನವನು ಎಲೆಕ್ಟ್ರಾನಿಕ್ ಎಂಜಿನೀಯರ್. ಅವನು ಹೇಳಿದ್ದು ಜರ್ಮನಿ ಯಲ್ಲಿ ಹೋಟೆಲ್ ಬಿಸಿನೆಸ್ ಮಾಡಿ ಗೆಲ್ಲಲು ಇಂಡಿಯನ್ಸ್ ಗೆ ಮತ್ತೆ ಪಾಕಿಸ್ತಾನಿ ಹಾಗೂ ಟರ್ಕಿ ಗಳಿಗೆ ಮಾತ್ರ ಸಾಧ್ಯ ಅಂದ. 

              ಜರ್ಮನಿಯ ಹೋಟೆಲ್ ಗಳಲ್ಲಿ ಸಸ್ಯಾಹಾರಿಗಳು  ಬಹಳ ಇಷ್ಟ ಪಡುವ dish ಅಂದರೆ aspharagus ಮತ್ತು ಸಲಾಡ್. ಮಾಂಸಹಾರಿಗಳಿಗೆ Schweinshaxe ಅಂದರೆ ಪೋರ್ಕ್ ಲೆಗ್, ಹಂದಿಯ ಕಾಲು! ಜರ್ಮನಿ ಗೆ ಭೇಟಿ ನೀಡುವ ಎಲ್ಲರೂ ಈ ಎರಡು dish ಗಳ ಟೇಸ್ಟ್ ಮಾಡುವುದು ಕಡ್ಡಾಯ! 

              ನಮ್ಮ ನಾಯಕ್ ರವರಿಗೆ ಮೀಸೆ ಟ್ರಿಮ್ ಮಾಡೋಕೊಳ್ಳಲು ಸಣ್ಣ ಕತ್ತರಿ ಕೊಳ್ಳ ಬೇಕಿತ್ತು. ಯಾವುದೋ ಸ್ಟೋರ್ ಗೆ ಹೊದೇವು.  ಏನು ಕೇಳಬೇಕು. ನಾಯಕ್ ಕೈಯಲ್ಲಿ ಕತ್ತರಿಸುವ ತರ ಆಕ್ಟ್ ಮಾಡುತ್ತ scissors ಇದೆಯಾ ಅಂತ ಕೇಳಿದರು. ಆಕೆ its here ಅಂದಳು… ನಾಯಕ್ where show me ಅಂದರು. ಅವಳು ಅಲ್ಲೇ table ಮೇಲಿದ್ದ  ಒಂದು ಕತ್ತರಿ ತೋರಿಸಿದಳು. ಅದನ್ನು ತೆಗೆದು ಕೊಳ್ಳಲು ಹೋದ ನಾಯಕ್ ರನ್ನು ತಡೆದು No.. this.. schere..mine ಅಂದಳು. Schere ಅಂದ್ರೆ scissors ಅಂತ ಗೊತ್ತಾಯ್ತು. ಆ ಸ್ಟೋರ್ ನಲ್ಲಿ ಅದು ಇರಲಿಲ್ಲ ಅವಳ schere ಅನ್ನು ಕೊಡಲು ಆಕೆ ತಯಾರು ಇರಲಿಲ್ಲ!

ಅಂದು ನಾವು ಸ್ಟುಗ್ಗರ್ಟ್ ಗೆ ಹೋದೆವು. ಇದು ಜರ್ಮನಿಯ 6ನೆ ದೊಡ್ಡ ಸಿಟಿ. Mercedes benz ಮತ್ತು Porche ಕಂಪನಿಗಳ ಕೇಂದ್ರ ಸ್ಥಾನ. ಅಲ್ಲಿ ನಾವು ಬ್ಲಾಕ್ ಫಾರೆಸ್ಟ್ ಎಂದು ಕರೆಯಲ್ಪಡುವ ದಟ್ಟ ಅರಣ್ಯ ಪ್ರದೇಶದೊಳಗೆ ಹೋದೆವು. ಸೂರ್ಯನ ಕಿರಣಗಳು ಒಳಗೆ ಇಳಿಯದಂತಹ ಕಾಡು. ಹೊಸ ಮರಗಳು ಪ್ರೌಢ ಅವಸ್ಥೆಗೆ ಬಂದ ನಂತರವೇ ಹಳೆಯ ಮರಗಳ ಕಟಾವು ಮಾಡುತ್ತಿದ್ದರು. ಇಲ್ಲಿ ಟ್ರೆಕ್ಕಿಂಗ್ ಗೆ ಜಾಗ ಮಾಡಿದ್ದಾರೆ. ಕಾಮ್ ಬಾಕ್ ಎನ್ನುವ ಹಳ್ಳಿ ಗೆ ಭೇಟಿ ನೀಡಿ ವಾಪಸ್ ಬರುವಷ್ಟರಲ್ಲಿ ರಾತ್ರಿ 11.30. ನಾವಿದ್ದ ಹಳ್ಳಿಯಲ್ಲಿ May day ಗೆ ತಯಾರಿ ನಡೆದಿತ್ತು.. ರಾತ್ರಿಯೆಲ್ಲ ಮೇ ಡೇ ಆಚರಣೆ ನಡೆಯುತ್ತದೆ ಎಂದು ಹೇಳಿದರು. ರಾತ್ರಿಯೆಲ್ಲಾ  ಹಾಡು ಕುಣಿತ ಬಹಳ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ನಾವು ಸುಮಾರು ಹನ್ನೆರೆಡೂವರೆ ವರೆಗೆ ಕಾಯುತ್ತಿದ್ದೆವು. ಸಮಾರಂಭ ಪ್ರಾರಂಭವಾಗಿರಲಿಲ್ಲ. ನಮ್ಮ ಕಣ್ಣು ಎಳೆಯಲು ಆರಂಭಗೊಂಡವು. ದಿನ ಪೂರ್ತಿ ಬೆಟ್ಟಗುಡ್ಡಗಳನ್ನು ಹತ್ತಿಳಿದು ಆಯಾಸವಾಗಿತ್ತು. ನಿದ್ದೆಹತ್ತಿದ್ದೇ ತಿಳಿಯಲಿಲ್ಲ. ಬವೇರಿಯನ್ ಡ್ಯಾನ್ಸ್ ನೋಡುವ ಅವಕಾಶ ನಮಗೆಮಿಸ್ ಆಯಿತು.

ಬಿ ಎಂ ಡಬ್ಲ್ಯೂ ಮತ್ತು ಹಂದಿಯ ಕಾಲು !

ನಮ್ಮ ಮುಂದಿನ ಭೇಟಿ ಮ್ಯೂನಿಕ್ ನಗರಕ್ಕೆ. ಅಲ್ಲಿ BMW ಷೋ ರೂಮ್ ಗೆ ಹೋದೆವು. ಇಲ್ಲಿಯ ವಸ್ತು ಸಂಗ್ರಹಾಲಯ ನೋಡಲೇ ಬೇಕಾದ ಸ್ಥಳ. ಕಾರು ಪ್ರಿಯರ ಕಾಶಿ. 1929 ರ ಮಾಡೆಲ್ ಗಳಿಂದ ಹಿಡಿದು ಇತ್ತೀಚಿನ ಟ್ರೆಂಡ್ ವರೆಗಿನ ಕಾರುಗಳು. ಕಣ್ಣಿಗೆ ಕಾಣುವ ಕನಸಿನ ಗಾಡಿಗಳ ಒಳಗೆ ಕುಳಿತು ಪೋಸ್ ಕೊಟ್ಟು ಫೋಟೋ ತೆಗಿಸಿಕೊಳ್ಳುವ ಸಂಭ್ರಮ. ಮಗಳಿಗೆ  ಹೇಳಿದೆ. ಒಪೆನ್ ಹುಡ್ ಕಾರ್ ನಲ್ಲಿ ಕುಳಿತುಕೊ. ಕ್ಲಿಕ್ ಮಾಡ್ತೇನೆ ಅಂತ. ಹೇ.. ನೋ..ನಾನು ತಗೊಳ್ಳೋ BMW ನಲ್ಲೇ ಕುಳಿತು ಪೋಸ್ ಕೊಡ್ತೇನೆ ಅಂದಳು. ಹೀ ಹೀ … ! ಅವಳನ್ನು ಸಿಟಿ ಸುತ್ತುವಾಗ ಸೈಕಲ್ ರಿಕ್ಷಾ ದಲ್ಲಿ ಕೂರಿಸುವ ಪ್ರೋಗ್ರಾಮ್ ಇತ್ತು ! ಆದರೂ ಹೇಳಿದೆ. ಆಯಿತು ಮಗಳೇ. ಹಾಗೆ ಮಾಡು. ಮೊದಲು ಚೆನ್ನಾಗಿ ಓದು. ಒಳ್ಳೆ ಕೆಲಸಕ್ಕೆ ಸೇರು. ಕಷ್ಟಪಡು ಯಾವುದೂ ಅಸಾಧ್ಯವಲ್ಲ . ಆದರೆ ನಿನ್ನ ಕೋಪ ಬಿಡು. ಶಾರ್ಟ್ ಟೆಂಪರ್ ಇದೆ ನಿನಗೆ ಅಂದೆ. ಅದನ್ನು ನಿಮ್ಮಿಂದಲೇ ಕಲಿತದ್ದು ಅಂತ ತಿರುಗೇಟು ಕೊಟ್ಟಳು ! ಆಗ ನಾನು ಅವಳಿಗೆ ಒಂದು ಕಥೆ ಹೇಳಿದೆ. ಒಬ್ಬ ಅಪ್ಪ ಇದ್ದನಂತೆ. ಅವನಿಗೆ ಇಬ್ಬರು ಮಕ್ಕಳು. ಅಪ್ಪ ತುಂಬಾ ಕುಡುಕ, ಕುಡಿದು ಮನೆಯಲ್ಲಿ ಗಲಾಟೆ. ಅವನ ಇಬ್ಬರು ಮಕ್ಕಳಲ್ಲಿ ಒಬ್ಬ ಅಪ್ಪನಂತೆ ಕುಡುಕ ಕೆಡುಕ ಆಗಿಬಿಟ್ಟಿದ್ದ. ಯಾಕೆ ಹೀಗಾದೆ ಅಂತ ಅವನನ್ನು ಕೇಳಿದಾಗ ನಮ್ಮ ಅಪ್ಪನನ್ನು ನೋಡಿ ಕಲಿತುಬಿಟ್ಟೆ ಅಂದ. ಇನ್ನೊಬ್ಬ ಮಗ ತುಂಬಾ ಒಳ್ಳೆಯವನು. ನೀನು ಹೇಗೆ ಒಳ್ಳೆಯವನಾದೆ ಅಂತ ಕೇಳಿದಾಗ ಅವನೂ ಹೇಳ್ತಾನೆ.  ನಮ್ಮಪ್ಪನನ್ನು ನೋಡಿ ಕಲಿತೆ. ಒಬ್ಬ ಮನುಷ್ಯ ಹೇಗಿರಬಾರದು ಎಂದು ಅರಿತುಕೊಂಡೇ ಅಂದ. ಕಥೆ ಮುಗಿಸಿ ಮಗಳಿಗೆ ಹೇಳಿದೆ. ಕಲಿಯುವುದು ನಾವು. ಅದು ಪಾಸಿಟಿವ್ ಕಲಿಕೆಯೋ ಅಥವಾ ನೆಗಟಿವ್ ಕಲಿಕೆಯೋ ಅನ್ನೋದು ನಮ್ಮಲ್ಲಿ ಇರುತ್ತೆ. 

ಅಲ್ಲಿಂದ ನಾವು ಸಿಟಿ ವಾಕ್ ಮಾಡಿದೆವು. Karl platz ನಿಂದ marine platz ವರೆಗೆ ವರೆಗೆ ಕಾಲು ಹಾಕಿದೆವು. Rateschieler building ಅನ್ನು ನೋಡಿದೆವು. ಅಲ್ಲಿ pavement ಮೇಲೆ ನಡೆಯುತ್ತಿದ್ದ concert ಬಹಳ ಖುಷಿ ಕೊಟ್ಟಿತು. ನಮ್ಮಲ್ಲಿ ಕೆಲವರು ಹೆಜ್ಜೆ ಕೂಡ ಹಾಕಿದರು.ಮೆಯೊ ಹಾಲ್ ಎಂದು ಕರೆಯುವ ಈ ಕಟ್ಟಡದಲ್ಲಿ 1500 ಸೀಟ್ ಗಳಿರುವ ರೆಸ್ಟೋರೆಂಟ್ ಇತ್ತು. ಉದ್ದಕ್ಕೂ ಸಂಗೀತ..ಕುಣಿತ..ಇದೆಲ್ಲಾ ಮೇ ಡೇ ಸಂಭ್ರಮ. 

ಮುಂದೆ ಬಂದಾಗ ಅಲ್ಲಿ  ಸೈಕಲ್ ರಿಕ್ಷಾ ಗಳು ನಿಂತಿದ್ದವು. 35 ಯುರೋ ಕೊಟ್ಟರೆ ಸಿಟಿ ರೌಂಡ್ ಮಾಡಿಸುತ್ತೇವೆ ಎಂದರು.  ಬಿಎಂಡಬ್ಲ್ಯೂ ನಲ್ಲಿ ಕೂರುವ ಯೋಚನೆ ಮಾಡಿದವರು ನಾವು. ಸೈಕಲ್ ರಿಕ್ಷಾ ತಗೊಂಡೆವು. ರೈಡ್ ಚೆನ್ನಾಗಿತ್ತು. ಖಾಲಿ ಖಾಲಿ ರಸ್ತೆಗಳು. ಎಲ್ಲಾ ಕಡೆ ಜನ. ನಮ್ಮ ರಿಕ್ಷಾ ಡ್ರೈವರ್ ನಮ್ಮನ್ನು ನೋಡಿಯೋ ಏನೋ ಹಿಂದಿ ಹಾಡುಗಳನ್ನು ಹಾಕಿದ. Maxmuller ನ ಅಪೇರಾ ಹೌಸ್ ನೋಡಿದೇವು. ಅಡಾಲ್ಫ್ ಹಿಟ್ಲರ್ ಸಭೆ ನಡೆಸುತ್ತಿದ್ದ Odeon place ಅನ್ನು ನೋಡಿದೆವು.ಅಲ್ಲಿ ಕಿಂಗ್ಸ್ ಗಾರ್ಡನ್ ಅನ್ನು ನೋಡಿದೆವು. ಗ್ಲೆಸಿಯರ್ ನಿಂದ ಹರಿಯುತ್ತಿದ್ದ ತೊರೆಗೆ ಅಡ್ಡ ಕಟ್ಟೆ ನಿರ್ಮಿಸಿ ಕೃತಕ ಅಲೆಗಳನ್ನು ಸೃಷ್ಟಿಸಿ ಅಲ್ಲಿ ಸ್ಕೀ ಮಾಡುತ್ತಿದ್ದ ಯುವಕರ ದಂಡನ್ನು ನೋಡಿದೆವು. 

 ಬವೇರಿಯಾದ  ಅತೀ ಪ್ರಸಿದ್ಧ ಮೆನು ಅಂದರೆ Schweinshaxe. ಇದನ್ನು ಉಚ್ಚರಿಸಲು ನಾವು ಬಹಳ ಸಮಯ ತೆಗೆದುಕೊಂಡೆವು. ಸ್ವಯನ್ ಸಾಜ್ ಎನ್ನುವ ಇದು ಹ್ಯಾಮ್ಹಾಕ್ ಅಂದರೆ ಹಂದಿಯ ಕಾಲಿನಿಂದ ಮಾಡಿದ ಡಿಶ್. ನುಣ್ಣಗೆ ಅರೆದ ಪೊಟ್ಯಾಟೋ ಮ್ಯಾಶಿಂಗ್  ಮತ್ತು ರೆಡ್ ಕ್ಯಾಬೇಜ್ ನ ಗ್ರೇವಿ ಯೊಂದಿಗೆ ಸರ್ವ್ ಮಾಡುತ್ತಾರೆ. ಬೆಳ್ಳುಳ್ಳಿ, ಲವಂಗ ಮತ್ತು ಉಪ್ಪಿನ ಪುಡಿ ಯನ್ನುಸವರಿ ಮೂರು ಗಂಟೆಗಳ ತನಕ ಓವನ್ ನಲ್ಲಿ ಬೇಯಿಸಿದರೆ ಅಡುಗೆ ಮುಗಿಯಿತು. ನಾವು ಸಾಮಾನ್ಯವಾಗಿ ಪೋರ್ಕ್ ಅನ್ನು ಬಳಸುವುದಿಲ್ಲವಾದರೂ (ಮಡಿಕೇರಿಗೆ ಹೋದಾಗ ಅಲ್ಲಿ ಸ್ಥಳೀಯ ಸ್ನೇಹಿತರ ಬಲವಂತಕ್ಕೆ ರುಚಿ ನೋಡಿದ್ದು ಇದೆ ಮತ್ತು ಮಡಿಕೇರಿಯ ಚುರುಕು ಮೆಣಸಿನಕಾಯಿ ಹಾಕಿ ಮಾಡಿದ ಪಂದಿ  ಪುಳಿ ಯನ್ನು ಮನಸಾರೆ ಮೆಚ್ಚಿದ್ದೂ ಉಂಟು). ಆದರೆ ಇಲ್ಲಿಯೂ ಜರ್ಮನಿಯ ಸ್ನೇಹಿತರು ಬವೇರಿಯದ ಈ ಫುಡ್ ಅನ್ನು ಟೇಸ್ಟ್ ಮಾಡಲೇ ಬೇಕೆಂದು ಒತ್ತಾಯಿಸಿದರ ಮೇರೆಗೆ ರಾತ್ರಿ ಊಟಕ್ಕೆ Schweinshaxe…ಎಷ್ಟು ಹೆವಿ ಮೀಲ್ ಎಂದರೆ ನಾನು ಆರ್ಡರ್ ಮಾಡಿದ ಫುಡ್ ನ ಅರ್ಧ ಭಾಗ ಮಾತ್ರ ಉಳಿಸಿ ಕೊಂಡು ಅರ್ಧ ಮಡದಿಗೆ ಕೊಟ್ಟರೆ ಆಕೆ ಅದರಲ್ಲಿ ಅರ್ಧ ತಾನು ಉಳಿಸಿಕೊಂಡು ಅರ್ಧ ಮಗಳಿಗೆ ಕೊಟ್ಟಳು

ಮುಂದುವರೆಯುವುದು. . . . . .

ಆಲ್ಫ್ ಮತ್ತು ಸರೋವರಗಳ ನಡುವೆ (1/7)

ಕಾಫ್ ಬರ್ನ್ ಮತ್ತು ಸಾಲ್ಸ್ ಬರ್ಗ್

ನಮ್ಮ ಮೊದಲ  ಯುರೋಪ್ ಕಡೆಗಿನ  ಟೂರ್ ಏಪ್ರಿಲ್ 27 ಕ್ಕೆ ಆರಂಭಗೊಳ್ಳುವುದಿತ್ತು. ನಾನು  ನನ್ನ ಮಡದಿ ಮತ್ತು ಮಗಳು ಮೂವರು ಹೊರಟಿದ್ದೆವು. ಆ ಭಾಗಕ್ಕೆ ಇದು ನಮ್ಮ ಮೊದಲ ಪ್ರವಾಸ. ಹೇಗೋ ಏನೋ ಎಂಬ ಆತಂಕ ದೂರ ಮಾಡಿದ್ದು  ನಮ್ಮ ಜೊತೆಯಾಗಿ ಸ್ನೇಹಿತರು. ಅವರು ಈಗಾಗಲೇ ಎರಡು ಬಾರಿ ಯುರೋಪ್ ಪ್ರವಾಸ ಮುಗಿಸಿದ ಸೀನಿಯರ್ ಆಗಿದ್ದರಿಂದ ಅವರ ಮಾರ್ಗದರ್ಶನದ ನಂಬಿಕೆ ಮೇಲೆ ನಾವು ಧೈರ್ಯವಾಗಿದ್ದೆವು. 

೨೬ ರ  ಮಧ್ಯಾಹ್ನ ದಿಂದಲೇ ನಮ್ಮ ಪ್ಯಾಕಿಂಗ್ ಶುರುವಾಯಿತು. ಏನೆಲ್ಲಾ ಪ್ಯಾಕ್ ಮಾಡಬೇಕು ಏನು ಬೇಡ ಎಂಬ ಬಗ್ಗೆ ನಮ್ಮಲ್ಲೇ ಬಹಳ ವಾಗ್ಯುದ್ದವೇ ನಡೆದು ಹೋಯಿತು. ನಾನು Less luggage more comfort ತತ್ವಕ್ಕೆ ಬದ್ಧನಾಗಿದ್ದೆ. ಆದರೆ ಯಥಾ ಪ್ರಕಾರ ನನ್ನ ವಾದವನ್ನು ಯಶಸ್ವಿಯಾಗಿ ಮೂಲೆಗೆ ತಳ್ಳಲಾಯಿತು. ಅದಕ್ಕೆ ಮನೆಯವರು  ಕೊಟ್ಟ ಕಾರಣಗಳು ಕೂಡ ನನ್ನ ಹಿತ ರಕ್ಷಣೆಗಾಗಿಯೇ (?) ಇದ್ದವು. ಯುರೋಪ್ ನಲ್ಲಿ ಭಯಂಕರ ಚಳಿ ಇದೆ. ನೀವದನ್ನು ತಡೆಯುವುದಿಲ್ಲಾ. ಹಾಗಾಗಿ ಬೆಚ್ಚನೆಯ ಉಡುಪುಗಳು ಬೇಕೇ ಬೇಕು. ಸ್ವೇಟರ್, ಮಫ್ಲರ್, ಜಾಕೇಟ್ಸ್, ಥರ್ಮಲ್ಸ್ ಇವು ಸೇರಿಕೊಂಡವು. ಅಲ್ಲಿಯ ಬ್ರೆಡ್ ಜಾಮ್ ಎರಡು ದೀನ್ ತಿಂದರೆ ಖಂಡಿತ ನಿಮ್ಮ ಹೊಟ್ಟೆ ಕೆಡುತ್ತದೆ. ಹಾಗಾಗಿ ಅಡುಗೆಯ ಸೆಲ್ವಮ್ಮ ಮಾಡಿಕೊಟ್ಟ ಡ್ರೈ ಚಪಾತಿ, ಟೊಮ್ಯಾಟೋ ಗೊಜ್ಜು ಡಬ್ಬಗಳು, ಚಕ್ಕುಲಿ,ಕೋಡುಬಳೆ ಚುರುಮುರಿ, ರವೇ ಉಂಡೆ ಡಬ್ಬಗಳನ್ನು ತುರುಕಿ ಇಡಲಾಯಿತು. ನಿಮಗೆ ಬಿಸಿ ಅನ್ನ  ಮಾಡಿ ಕೊಡುತ್ತೇನೆ ಅಂತ ಮಡದಿ ಸಣ್ಣ ರೈಸ್ ಕುಕ್ಕರ್ ಅನ್ನು ತೆಗೆದು ಕೊಂಡಳು. ಇವೆಲ್ಲಾ ಬೇಡಮ್ಮ ಬ್ಯಾಗೇಜ್ ಲಿಮಿಟ್ ಮೀರಿದರೆ ಊಟದ ಖರ್ಚಿಗಿಂತ ಜಾಸ್ತಿ ಹಣ ಕಟ್ಟಿಸಿಕೊಳ್ಳುತ್ತಾರೆ ಅಂತ ನಾನು ವಿಲಪಿಸಿದರೆ, ನಿಮಗೆ ಏನೂ ಗೊತ್ತಾಗೊಲ್ಲ ಸುಮ್ಮನಿರಿ ಎಂದು ಬಾಯಿ ಮುಚ್ಚಿಸಿದರು. ಎಲ್ಲಾ ‘ಯಜಮಾನ’ ರಂತೆ ನಾನೂ ತೆಪ್ಪಗಾದೆ. ಆ ದೇಶಗಳಲ್ಲಿ ಲಗೇಜ್ ಹೊತ್ತುಕೊಂಡು ತಿರುಗಲು ಆಳುಗಳು ಸಿಗೋಲ್ಲ. ನಮ್ಮ ಸೂಟಕೇಸ್ ನಾವೇ ಹೊರಬೇಕು ಅಂತ ಹೇಳಿದೆ. ಅವರೇನು ಹೆದರಲಿಲ್ಲ. ನೀವಿದ್ದೀರಲ್ಲಾ ಅಂದಳು ತಣ್ಣಗೆ.

Continue reading “ಆಲ್ಫ್ ಮತ್ತು ಸರೋವರಗಳ ನಡುವೆ (1/7)”