ಆಲ್ಫ್ ಮತ್ತು ಸರೋವರಗಳ ನಡುವೆ (1/7)

ಕಾಫ್ ಬರ್ನ್ ಮತ್ತು ಸಾಲ್ಸ್ ಬರ್ಗ್

ನಮ್ಮ ಮೊದಲ  ಯುರೋಪ್ ಕಡೆಗಿನ  ಟೂರ್ ಏಪ್ರಿಲ್ 27 ಕ್ಕೆ ಆರಂಭಗೊಳ್ಳುವುದಿತ್ತು. ನಾನು  ನನ್ನ ಮಡದಿ ಮತ್ತು ಮಗಳು ಮೂವರು ಹೊರಟಿದ್ದೆವು. ಆ ಭಾಗಕ್ಕೆ ಇದು ನಮ್ಮ ಮೊದಲ ಪ್ರವಾಸ. ಹೇಗೋ ಏನೋ ಎಂಬ ಆತಂಕ ದೂರ ಮಾಡಿದ್ದು  ನಮ್ಮ ಜೊತೆಯಾಗಿ ಸ್ನೇಹಿತರು. ಅವರು ಈಗಾಗಲೇ ಎರಡು ಬಾರಿ ಯುರೋಪ್ ಪ್ರವಾಸ ಮುಗಿಸಿದ ಸೀನಿಯರ್ ಆಗಿದ್ದರಿಂದ ಅವರ ಮಾರ್ಗದರ್ಶನದ ನಂಬಿಕೆ ಮೇಲೆ ನಾವು ಧೈರ್ಯವಾಗಿದ್ದೆವು. 

೨೬ ರ  ಮಧ್ಯಾಹ್ನ ದಿಂದಲೇ ನಮ್ಮ ಪ್ಯಾಕಿಂಗ್ ಶುರುವಾಯಿತು. ಏನೆಲ್ಲಾ ಪ್ಯಾಕ್ ಮಾಡಬೇಕು ಏನು ಬೇಡ ಎಂಬ ಬಗ್ಗೆ ನಮ್ಮಲ್ಲೇ ಬಹಳ ವಾಗ್ಯುದ್ದವೇ ನಡೆದು ಹೋಯಿತು. ನಾನು Less luggage more comfort ತತ್ವಕ್ಕೆ ಬದ್ಧನಾಗಿದ್ದೆ. ಆದರೆ ಯಥಾ ಪ್ರಕಾರ ನನ್ನ ವಾದವನ್ನು ಯಶಸ್ವಿಯಾಗಿ ಮೂಲೆಗೆ ತಳ್ಳಲಾಯಿತು. ಅದಕ್ಕೆ ಮನೆಯವರು  ಕೊಟ್ಟ ಕಾರಣಗಳು ಕೂಡ ನನ್ನ ಹಿತ ರಕ್ಷಣೆಗಾಗಿಯೇ (?) ಇದ್ದವು. ಯುರೋಪ್ ನಲ್ಲಿ ಭಯಂಕರ ಚಳಿ ಇದೆ. ನೀವದನ್ನು ತಡೆಯುವುದಿಲ್ಲಾ. ಹಾಗಾಗಿ ಬೆಚ್ಚನೆಯ ಉಡುಪುಗಳು ಬೇಕೇ ಬೇಕು. ಸ್ವೇಟರ್, ಮಫ್ಲರ್, ಜಾಕೇಟ್ಸ್, ಥರ್ಮಲ್ಸ್ ಇವು ಸೇರಿಕೊಂಡವು. ಅಲ್ಲಿಯ ಬ್ರೆಡ್ ಜಾಮ್ ಎರಡು ದೀನ್ ತಿಂದರೆ ಖಂಡಿತ ನಿಮ್ಮ ಹೊಟ್ಟೆ ಕೆಡುತ್ತದೆ. ಹಾಗಾಗಿ ಅಡುಗೆಯ ಸೆಲ್ವಮ್ಮ ಮಾಡಿಕೊಟ್ಟ ಡ್ರೈ ಚಪಾತಿ, ಟೊಮ್ಯಾಟೋ ಗೊಜ್ಜು ಡಬ್ಬಗಳು, ಚಕ್ಕುಲಿ,ಕೋಡುಬಳೆ ಚುರುಮುರಿ, ರವೇ ಉಂಡೆ ಡಬ್ಬಗಳನ್ನು ತುರುಕಿ ಇಡಲಾಯಿತು. ನಿಮಗೆ ಬಿಸಿ ಅನ್ನ  ಮಾಡಿ ಕೊಡುತ್ತೇನೆ ಅಂತ ಮಡದಿ ಸಣ್ಣ ರೈಸ್ ಕುಕ್ಕರ್ ಅನ್ನು ತೆಗೆದು ಕೊಂಡಳು. ಇವೆಲ್ಲಾ ಬೇಡಮ್ಮ ಬ್ಯಾಗೇಜ್ ಲಿಮಿಟ್ ಮೀರಿದರೆ ಊಟದ ಖರ್ಚಿಗಿಂತ ಜಾಸ್ತಿ ಹಣ ಕಟ್ಟಿಸಿಕೊಳ್ಳುತ್ತಾರೆ ಅಂತ ನಾನು ವಿಲಪಿಸಿದರೆ, ನಿಮಗೆ ಏನೂ ಗೊತ್ತಾಗೊಲ್ಲ ಸುಮ್ಮನಿರಿ ಎಂದು ಬಾಯಿ ಮುಚ್ಚಿಸಿದರು. ಎಲ್ಲಾ ‘ಯಜಮಾನ’ ರಂತೆ ನಾನೂ ತೆಪ್ಪಗಾದೆ. ಆ ದೇಶಗಳಲ್ಲಿ ಲಗೇಜ್ ಹೊತ್ತುಕೊಂಡು ತಿರುಗಲು ಆಳುಗಳು ಸಿಗೋಲ್ಲ. ನಮ್ಮ ಸೂಟಕೇಸ್ ನಾವೇ ಹೊರಬೇಕು ಅಂತ ಹೇಳಿದೆ. ಅವರೇನು ಹೆದರಲಿಲ್ಲ. ನೀವಿದ್ದೀರಲ್ಲಾ ಅಂದಳು ತಣ್ಣಗೆ.

Continue reading “ಆಲ್ಫ್ ಮತ್ತು ಸರೋವರಗಳ ನಡುವೆ (1/7)”