ನಿಮಗೆ ಯಾರೊಂದಿಗೋ, ಯಾವಾಗಲೋ, ಜಗಳವಾಗಿ ವೈಮನಸ್ಯ ಮೂಡಿರುತ್ತದೆ. ಆತ್ಮೀಯ ಗೆಳೆಯ ಗೆಳತಿಯೊಡನೆ ಕಹಿ ಘಟನೆ ನಡೆದು ಸಂಬಂಧ ಕಡಿದು ಹೋಗುತ್ತದೆ. ಅವರ ಬಗ್ಗೆ ನಿಮಗೆ ಪೂರ್ತಿ ನೆಗಟಿವ್ ಭಾವನೆಗಳೇ ತುಂಬಿ ಹೋಗಿರುತ್ತವೆ ಎಂದು ಭಾವಿಸಿರಿ.
ಆ ಕಹಿ ಗಳಿಗೆಯನ್ನು ಪ್ರತಿ ಸಾರಿ ನೆನಪಿಸಿಕೊಂಡಾಗಲೂ ನೀವು ಅಂದು ಅನುಭವಿಸಿದ ಅದೇ ಕೆಟ್ಟ ಭಾವನೆಗಳನ್ನು ಮತ್ತೆ ಮನಸಿಗೆ ತಂದು ಕೊಳ್ಳುತ್ತೀರಿ. ನಿಮ್ಮ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ. ಪ್ರತಿ ಬಾರಿಯ ನೆನಪಿನಲ್ಲಿಯೂ ನಿಮ್ಮ ಶರೀರ ಮನಸ್ಸು ಮತ್ತೆ ಕೆಟ್ಟ ಸನ್ನಿವೇಶದ ಪ್ರಭಾವವನ್ನು ಮತ್ತೊಮ್ಮೆ ಅನುಭವಿಸುತ್ತಾ ಜರ್ಜರಿತವಾಗುತ್ತಾ ಹೋಗುತ್ತದೆ.
ಇದು ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ. ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ತಕ್ಕಂತೆ ಮಿದುಳಿಗೆ ಸೂಚನೆಗಳು ಹೋಗುತ್ತವೆ. ಮಿದುಳು ಅದಕ್ಕೆ ಅನುಗುಣವಾಗಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡಲು ನಿರ್ದೇಶನ ನೀಡುತ್ತದೆ. ಈ ಹಾರ್ಮೋನ್ ಗಳೇ ಶರೀರವನ್ನು ದುರ್ಬಲ ಗೊಳಿಸುತ್ತವೆ. ನಮ್ಮ ದೇಹದಲ್ಲಿ 60 ಟ್ರಿಲಿಯನ್ ಗೂ ಅಧಿಕ ಜೀವಕೋಶ ಗಳಿವೆ. ಈ ಜೀವ ಕೋಶಗಳು ಆರೋಗ್ಯಕರವಾಗಿ ಇರಬೇಕೆಂದರೆ ಅವುಗಳಿಗೆ ಆರೋಗ್ಯಕರ ವಾತಾವರಣವೂ ಇರಬೇಕು. ಜೀವಕೋಶಗಳಿಗೆ ಬೇಕಾದ ಪ್ರೊಟೀನ್, ವಿಟಮಿನ್, ಮಿನರಲ್ಸ್, ಅಮಿನೊ ಆಸಿಡ್ ಗಳ ಜೊತೆಗೆ ಉಲ್ಲಾಸದ ಮನಸ್ಸು ಅಷ್ಟೇ ಮುಖ್ಯ. ಸರಿಯಾದ ಆರೈಕೆ ಇಲ್ಲದೆ ಜೀವಕೋಶಗಳು ಹಾಳಾಗುವುದಕ್ಕಿಂತ , ಹತ್ತು ಪಟ್ಟು ಹೆಚ್ಚು ಕೆಟ್ಟ ಯೋಚನೆಗಳಿಂದ , ನೆಗಟಿವ್ ಎಮೋಷನ್ ಗಳಿಂದ ಹಾನಿಗೆ ಒಳಗಾಗುತ್ತವೆ. ಇದೆ ಮನಸ್ಥಿತಿಯಲ್ಲಿ ಶರೀರವಿದ್ದಲ್ಲಿ ಜೀವಕೋಶಗಳು ಕೆಡಲು ಶುರುವಾಗುತ್ತವೆ, ಹೀಗೆ ಹಾಳಾದ ಜೀವಕೋಶಗಳು ತಮ್ಮ ಸುತ್ತಮುತ್ತಲಿನ ಆರೋಗ್ಯವಂತ ಕೋಶಗಳನ್ನು ನಾಶ ಮಾಡಲು ತೊಡಗುತ್ತವೆ. ಶರೀರ ಬಹಳ ಸುಲಭವಾಗಿ ಕಾಯಿಲೆಗಳಿಗೆ ತುತ್ತಾಗುತ್ತದೆ. ಬೇಗ ಕೃಶವಾಗುತ್ತದೆ.
ಮನುಷ್ಯ ನೆಂದ ಮೇಲೆ ಸಿಟ್ಟು ಕೋಪ ದುಃಖ ಇತ್ಯಾದಿ ಭಾವನೆಗಳು ಸಹಜ. ಅವೆಲ್ಲವೂ ಬರದಂತೆ ಸದಾ ನಗು ನಗುತ್ತಲೇ ಇರಬೇಕು ಅಂದರೆ ಕಷ್ಟವೇ. ಎಲ್ಲರೂ ನಿತ್ಯಾನಂದ ರಾಗಿರಲು ಸಾಧ್ಯವಿಲ್ಲ. ಹಾಗಾದರೆ ಮನಸನ್ನು ಹೇಗೆ ಉಲ್ಲಸಿತ ವಾಗಿ ಇಟ್ಟುಕೊಳ್ಳಬೇಕು ಎಂಬುದೇ ಪ್ರಶ್ನೆ.
ಸಂಸ್ಕೃತ ದಲ್ಲಿ ಒಂದು ಮಾತಿದೆ ” ಯದ್ಭಾವಮ್ ತದ್ಭವತಿ” ಅಂದರೆ ನಾವು ಏನು ಯೋಚನೆ ಮಾಡುತ್ತೇವೆಯೋ ಅದೇ ನಾವು ಆಗುತ್ತೇವೆ. ಯಥಾ ಪಿಂಡೆ ತಥಾ ಬ್ರಹ್ಮಾಂಡೇ ಎಂಬಂತೆ ಅಣು ಹೇಗಿರುತ್ತದೆಯೋ ಹಾಗೆಯೇ ಈ ಬ್ರಹ್ಮಾಂಡವೂ.
ಸನ್ನಿವೇಶಗಳಿಗೆ ತಕ್ಕ ಹಾಗೆ ನಾವು ಪ್ರತಿಕ್ರಿಯೆ ನೀಡಲೇ ಬೇಕು. ಅದು ಸಹಜ. ಹೆದರಿಕೆ ಭಯ ಇಲ್ಲದೆ ನಾವು ಬದುಕಲಾರೆವು. ಜೀವ ರಕ್ಷಣೆಗೆ ನಾವು ಹೆದರಲೇ ಬೇಕು. ಹಾಗೆ ಕೋಪಗೊಳ್ಳಲೂ ಬೇಕು. ಆಗ ಸ್ರವಿಸುವ ಹಾರ್ಮೋನ್ ಗಳು ದೇಹ ರಕ್ಷಣೆಗೆ ಬೇಕಾದ ಅಧಿಕ ಹಾರ್ಮೋನ್ ಗಳನ್ನು ಸ್ರವಿಸಿ ಆ ಕ್ಷಣದಿಂದ ನಮ್ಮನ್ನು ಪಾರು ಮಾಡುತ್ತದೆ. ಆದರೆ ಅದೇ ಎಮೋಷನ್ ಗಳನ್ನು ಸದಾ ಕಾಲ ನಾವು ಮನಸಿನಲ್ಲಿ ಪೋಷಿಸಬಾರದು ಅಷ್ಟೇ. ನಮ್ಮನ್ನು ದ್ವೇಷಿಸುವರನ್ನು ನಾವು ಕ್ಷಮಿಸಬೇಕು. ಅದು ದೊಡ್ಡ ಗುಣ ಅಂತ ಅಲ್ಲಾ , ನಮ್ಮ ಒಳಿತಿಗಾಗಿ. ನಮ್ಮ ಆರೋಗ್ಯಕ್ಕಾಗಿ.
ನಮ್ಮ ದೇಹದಲ್ಲಿ ನಾಲ್ಕು ಹಾರ್ಮೋನ್ ಗಳು ಮನಸಿಗೆ ಸಂತೋಷವನ್ನು ಉಂಟು ಮಾಡುವಂತವು. ಎಂಡೋರ್ಫಿನ್, ಡೋಪಮಿನ್, ಸೇರೋಟಾನಿನ್, ಮತ್ತು ಆಕ್ಸಿಟೋಸಿನ್ ಇವೇ ನಾಲ್ಕು.
ನಾವು ವ್ಯಾಯಾಮ ಮಾಡಿದಾಗ ಶರೀರದಲ್ಲಿ ಎಂಡೋರ್ಫಿನ್ ಉತ್ಪತ್ತಿಯಾಗುತ್ತದೆ. ವ್ಯಾಯಾಮದ ನೋವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕಸರತ್ತಿನ ನೋವೂ ಹಿತ ಎನಿಸುವುದು ಇದರಿಂದಲೇ. ಜೋರಾಗಿ ನಗುವುದರಿಂದಲೂ ಎಂಡೋರ್ಫಿನ್ ಬಿಡುಗಡೆ ಆಗುತ್ತದೆ. ನಿತ್ಯ 30 ನಿಮಿಷ ವ್ಯಾಯಾಮ ಮಾಡಿದರೆ , ಮತ್ತು ನಗು ಬರುವಂತಹ ಲಘು ಓದು, ಸಿನೆಮಾ, ಹರಟೆ ಇವುಗಳಿಂದ ಅಂದಿನ ಎಂಡೋರ್ಫಿನ್ ಕೋಟಾ ವನ್ನು ನಾವು ಪಡೆಯಬಹುದು.
ಯಾರಾದರೂ ನಮ್ಮನ್ನು ಹೊಗಳಿದಾಗ, ನಮ್ಮ ಕೆಲಸಗಳನ್ನು ಮೆಚ್ಚಿ ಮಾತಾನಾಡಿದಾಗ ನಮ್ಮ ಶರೀರದಲ್ಲಿ ಡೋಪಮಿನ್ ಉತ್ಪತ್ತಿ ಆಗುತ್ತದೆ. ಅಡುಗೆ ಕೆಲಸ ಮಾಡುವ ಮನೆಯ ಹೆಣ್ಣು ಮಕ್ಕಳಿಗೆ ಈ ಡೋಪಮಿನ್ ಸಿಗುವುದು ಕಷ್ಟ. ಅವರು ಕಷ್ಟ ಪಟ್ಟು ಅಡುಗೆ ಮಾಡಿದರು ಅದಕ್ಕೆ ತಪ್ಪು ಹಿಡಿಯುವರೆ ಜಾಸ್ತಿ ! ದಯ ಮಾಡಿ ನಿಮ್ಮ ಮನೆಯವರ ಅಡುಗೆಯನ್ನು ನೀವು ಕಡ್ಡಾಯವಾಗಿ ಹೊಗಳಿರಿ (ಅಡುಗೆ ಹೆಂಗಸರೇ ಮಾಡಲಿ ಅಥವಾ ಗಂಡಸರೇ ಮಾಡಲಿ ಅದು ಹೇಗೆ ಇರಲಿ, ಹೊಗಳುವುದು ಮರೆಯ ಬೇಡಿ. ಅದು ಡೋಪಮಿನ್ ಕೋಟಾ ಮರೆಯಬೇಡಿ). ನಾವು ಏನಾದರೂ ಹೊಸ ವಸ್ತು ಖರೀದಿಸಿದಾಗ ಖುಷಿ ಆಗುವುದು ಈ ಡೋಪಮಿನ್ ನಿಂದಲೇ. ಶಾಪಿಂಗ್ ಮಾಡಿದಾಗ ಸಂತೋಷವಾಗುವುದು ಏಕೆ ಎಂದು ನಿಮಗೆ ಗೊತ್ತಾಗಿರಬೇಕು.
ನಾವು ಬೇರೆಯವರಿಗೆ ಸಹಾಯ ಮಾಡಿದಾಗ ನಮ್ಮಲ್ಲಿ ಉಂಟಾಗುವ ಧನ್ಯತಾ ಭಾವಕ್ಕೆ ಕಾರಣ ಸೇರೋಟಿನ್ ಎನ್ನುವ ಹಾರ್ಮೋನ್. ಇದು ನಮ್ಮ ಮನಸ್ಸನ್ನು ಮುದಗೊಳಿಸುತ್ತೆ ಅಷ್ಟೇ ಅಲ್ಲ ನಮ್ಮ ಜೀವ ಕೋಶಗಳನ್ನು ಉತ್ತೇಜಿಸುತ್ತದೆ. ಅಡ್ರೆಸ್ ಕೇಳುವ ದಾರಿಹೋಕರಿಗೆ ಮಾಹಿತಿ ನೀಡಿದರೆ, ಅಂಧರಿಗೆ ರಸ್ತೆ ದಾಟಲು ಸಹಾಯ ಮಾಡಿದರೆ ಇತ್ಯಾದಿ ಸಣ್ಣಪುಟ್ಟ ಸಹಾಯ ಹಸ್ತ ಚಾಚುವ ಕೆಲಸಗಳಿಂದ ಈ ಹಾರ್ಮೋನ್ ನಮ್ಮನ್ನು ಖುಷಿಯಾಗಿ ಇಡುತ್ತದೆ.
ನಾವು ಬೇರೆಯವರಿಗೆ ಆತ್ಮೀಯತೆ ತೋರಿದಾಗ ಆಕ್ಸಿಟೋಸಿನ್ ಉತ್ಪತ್ತಿ ಆಗುತ್ತದೆ. ಅಳುವ ಮಗುವ ನು ರಮಿಸುವಾಗ ನಮ್ಮ ಸ್ಪರ್ಶ ಅಪ್ಪುಗೆ ನಮ್ಮಲ್ಲಿ ಮತ್ತು ಮಗುವಿನಲ್ಲೂ ಆಕ್ಸಿಟೋಸಿನ್ ನಿಂದಾಗಿ ಮನಸು ಸಮಾಧಾನ ಗೊಳ್ಳುತ್ತದೆ. ಹಸ್ತಲಾಘವ ಮಾಡುವುದರಿಂದ, ಆಲಿಂಗನ ದಿಂದ ಮನಸ್ಸು ಪ್ರಫುಲ್ಲಿತ ವಾಗುತ್ತದೆ.
ಆದ್ದರಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ, ನಮ್ಮ ಜೀವನವನ್ನು ಸುಖಮಯವಾಗಿಸುವ ದೃಷ್ಟಿಯಿಂದ ದಯವಿಟ್ಟು ಪ್ರತಿದಿನ ವ್ಯಾಯಾಮ ಮಾಡಿ, ನಗುತ್ತ ಇರಿ, ಬೇರೆಯವರ ಪ್ರಯತ್ನಗಳನ್ನು ಹೊಗಳಿ, ಅಗತ್ಯ ಇರುವವರಿಗೆ ಕೈಲಾದ ಸಣ್ಣ ಪುಟ್ಟ ಸಹಾಯ ಮಾಡಿ. ಮತ್ತು ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸಿ. ಕೊನೆಯದಾಗಿ ಬೇರೆಯವರ ತಪ್ಪುಗಳನ್ನು ಕ್ಷಮಿಸಿಬಿಡಿ.