ಆಲ್ಫ್ ಮತ್ತು ಸರೋವರಗಳ ನಡುವೆ (1/7)

ಕಾಫ್ ಬರ್ನ್ ಮತ್ತು ಸಾಲ್ಸ್ ಬರ್ಗ್

ನಮ್ಮ ಮೊದಲ  ಯುರೋಪ್ ಕಡೆಗಿನ  ಟೂರ್ ಏಪ್ರಿಲ್ 27 ಕ್ಕೆ ಆರಂಭಗೊಳ್ಳುವುದಿತ್ತು. ನಾನು  ನನ್ನ ಮಡದಿ ಮತ್ತು ಮಗಳು ಮೂವರು ಹೊರಟಿದ್ದೆವು. ಆ ಭಾಗಕ್ಕೆ ಇದು ನಮ್ಮ ಮೊದಲ ಪ್ರವಾಸ. ಹೇಗೋ ಏನೋ ಎಂಬ ಆತಂಕ ದೂರ ಮಾಡಿದ್ದು  ನಮ್ಮ ಜೊತೆಯಾಗಿ ಸ್ನೇಹಿತರು. ಅವರು ಈಗಾಗಲೇ ಎರಡು ಬಾರಿ ಯುರೋಪ್ ಪ್ರವಾಸ ಮುಗಿಸಿದ ಸೀನಿಯರ್ ಆಗಿದ್ದರಿಂದ ಅವರ ಮಾರ್ಗದರ್ಶನದ ನಂಬಿಕೆ ಮೇಲೆ ನಾವು ಧೈರ್ಯವಾಗಿದ್ದೆವು. 

೨೬ ರ  ಮಧ್ಯಾಹ್ನ ದಿಂದಲೇ ನಮ್ಮ ಪ್ಯಾಕಿಂಗ್ ಶುರುವಾಯಿತು. ಏನೆಲ್ಲಾ ಪ್ಯಾಕ್ ಮಾಡಬೇಕು ಏನು ಬೇಡ ಎಂಬ ಬಗ್ಗೆ ನಮ್ಮಲ್ಲೇ ಬಹಳ ವಾಗ್ಯುದ್ದವೇ ನಡೆದು ಹೋಯಿತು. ನಾನು Less luggage more comfort ತತ್ವಕ್ಕೆ ಬದ್ಧನಾಗಿದ್ದೆ. ಆದರೆ ಯಥಾ ಪ್ರಕಾರ ನನ್ನ ವಾದವನ್ನು ಯಶಸ್ವಿಯಾಗಿ ಮೂಲೆಗೆ ತಳ್ಳಲಾಯಿತು. ಅದಕ್ಕೆ ಮನೆಯವರು  ಕೊಟ್ಟ ಕಾರಣಗಳು ಕೂಡ ನನ್ನ ಹಿತ ರಕ್ಷಣೆಗಾಗಿಯೇ (?) ಇದ್ದವು. ಯುರೋಪ್ ನಲ್ಲಿ ಭಯಂಕರ ಚಳಿ ಇದೆ. ನೀವದನ್ನು ತಡೆಯುವುದಿಲ್ಲಾ. ಹಾಗಾಗಿ ಬೆಚ್ಚನೆಯ ಉಡುಪುಗಳು ಬೇಕೇ ಬೇಕು. ಸ್ವೇಟರ್, ಮಫ್ಲರ್, ಜಾಕೇಟ್ಸ್, ಥರ್ಮಲ್ಸ್ ಇವು ಸೇರಿಕೊಂಡವು. ಅಲ್ಲಿಯ ಬ್ರೆಡ್ ಜಾಮ್ ಎರಡು ದೀನ್ ತಿಂದರೆ ಖಂಡಿತ ನಿಮ್ಮ ಹೊಟ್ಟೆ ಕೆಡುತ್ತದೆ. ಹಾಗಾಗಿ ಅಡುಗೆಯ ಸೆಲ್ವಮ್ಮ ಮಾಡಿಕೊಟ್ಟ ಡ್ರೈ ಚಪಾತಿ, ಟೊಮ್ಯಾಟೋ ಗೊಜ್ಜು ಡಬ್ಬಗಳು, ಚಕ್ಕುಲಿ,ಕೋಡುಬಳೆ ಚುರುಮುರಿ, ರವೇ ಉಂಡೆ ಡಬ್ಬಗಳನ್ನು ತುರುಕಿ ಇಡಲಾಯಿತು. ನಿಮಗೆ ಬಿಸಿ ಅನ್ನ  ಮಾಡಿ ಕೊಡುತ್ತೇನೆ ಅಂತ ಮಡದಿ ಸಣ್ಣ ರೈಸ್ ಕುಕ್ಕರ್ ಅನ್ನು ತೆಗೆದು ಕೊಂಡಳು. ಇವೆಲ್ಲಾ ಬೇಡಮ್ಮ ಬ್ಯಾಗೇಜ್ ಲಿಮಿಟ್ ಮೀರಿದರೆ ಊಟದ ಖರ್ಚಿಗಿಂತ ಜಾಸ್ತಿ ಹಣ ಕಟ್ಟಿಸಿಕೊಳ್ಳುತ್ತಾರೆ ಅಂತ ನಾನು ವಿಲಪಿಸಿದರೆ, ನಿಮಗೆ ಏನೂ ಗೊತ್ತಾಗೊಲ್ಲ ಸುಮ್ಮನಿರಿ ಎಂದು ಬಾಯಿ ಮುಚ್ಚಿಸಿದರು. ಎಲ್ಲಾ ‘ಯಜಮಾನ’ ರಂತೆ ನಾನೂ ತೆಪ್ಪಗಾದೆ. ಆ ದೇಶಗಳಲ್ಲಿ ಲಗೇಜ್ ಹೊತ್ತುಕೊಂಡು ತಿರುಗಲು ಆಳುಗಳು ಸಿಗೋಲ್ಲ. ನಮ್ಮ ಸೂಟಕೇಸ್ ನಾವೇ ಹೊರಬೇಕು ಅಂತ ಹೇಳಿದೆ. ಅವರೇನು ಹೆದರಲಿಲ್ಲ. ನೀವಿದ್ದೀರಲ್ಲಾ ಅಂದಳು ತಣ್ಣಗೆ.

ಬೆಳಗಿನಜಾವ    ೪. ೩೦ ಕ್ಕೆ ಫ್ಲೈಟ್ ಇತ್ತು. ರಾತ್ರಿ ಹತ್ತೂವರೆಗೆಲ್ಲ ನಾವು ಏರ್ಪೋರ್ಟ್ ಗೆ ಬಂದುಬಿಟ್ಟಿವಿ. ಅಳಿಯ ಮಗಳು ನಮ್ಮನ್ನು ಬೀಳ್ಕೊಡಲು ಬಂದರು. ಹಾಗೆಯೇ ನಮ್ಮ ಸ್ನೇಹಿತರನ್ನು ಬೀಳ್ಕೊಡಲು ದೊಡ್ಡ ಅಭಿಮಾನಿ ಬಳಗವೇ ನೆರೆದಿತ್ತು. ನಾವು ಆ ದೇಶದ ಮೇಲೆ ದಂಡೆತ್ತಿ ಹೋಗುತ್ತಿರುವಷ್ಟು ಹೆಮ್ಮೆ ಅನಿಸಿತು ನಮಗೆ. ಎಲ್ಲರ ಜೊತೆ ನಿಂತು ಫೋಟೋ ತೆಗೆಸಿಕೊಂಡು ಬೈ ಬೈ ಎಂದು ಕೈ ಬೀಸಿ ಒಳ ಹೋದಿವಿ. ಇಂಟರ್ ನ್ಯಾಷನಲ್ ಲೌಂಜ್ ನಲ್ಲಿ ಕೂರುವುದೇ ನಮಗೆ ಹಮ್ಮು. ಅಲ್ಲಿ  ನನ್ನ ಮಡದಿಯ ಅಕ್ಕನ ಮಗ ಮತ್ತೆ ಅವನ ಫ್ಯಾಮಿಲಿ ಸಿಕ್ಕರು. ಸಿಂಗಪುರಕ್ಕೆ ಹೊರಟಿದ್ದರಂತೆ. ನಾವು ಹೀಗೆ ಯುರೋಪ್ ಅಂದಿವಿ. ಮತ್ತೆ ಆ ಕಡೆ ನೋಡಿದರೆ ನಮ್ಮ ಜ್ಯೋತಿಷಿ ಫ್ಯಾಮಿಲಿ ! ಅವರು ಸ್ವಿಟ್ಜರ್ಲ್ಯಾಂಡ್ ಗೆ ಅಂತೇ. ಹೊ ! ಇಡೀ ಜಗತ್ತೇ ಓಡಾಡುತ್ತಿದೆ. ನಾವಷ್ಟೇ ಇವತ್ತು ಹೊರಬಂದಿರೋದು ಅನ್ನಿಸಿತು. 

ಫ್ಲೈಟ್ ಆರಾಮ ಎನಿಸಲಿಲ್ಲ. ಬಹಳ ಕಿರಿದಾದ ಸೀಟ್ ಗಳು. ಮೊದಲೇ ದಪ್ಪಗಿರುವ ಮನೆಯವಳು ಮಿಸುಕಾಡಲೂ ಆಗದ ಹಾಗೆ ಪ್ಯಾಕ್ ಆಗಿಬಿಟ್ಟಿದ್ದಳು. ಬೆಳಿಗ್ಗೆ ೭ ಗಂಟೆಗೆ ನಾವು ಅಬುದಾಬಿ ತಲುಪಿದಾಗ ಅವಳ ಕಾಲುಗಳು ಊದಿ ನಡೆಯಲಾಗದ ಹಾಗೆ ಆಗಿಬಿಟ್ಟಿದ್ದವು. ಕುಂಟುತ್ತಲೇ ನಮ್ಮ ಹಿಂದೆ ಬಂದಳು. ಎಸ್ಕಲೇಟರ್ ಗಳನ್ನೂ ಹತ್ತಿ ಇಳಿದು ಅಲ್ಲಿ ಇಲ್ಲಿ ಹುಡುಕಿ  ಟ್ರಾನ್ಸ್ಫರ್ ಡೆಸ್ಕ್ ಬಳಿ ಹೋಗುವಷ್ಟರಲ್ಲಿ ನಮ್ಮ ಕನೆಕ್ಟಿಂಗ್ ಫ್ಲೈಟ್ ನ್ ಬೋರ್ಡಿಂಗ್ ಶುರುವಾಗಿ ಬಿಟ್ಟಿತ್ತು. ಮತ್ತೆ ಅಂತಹುದೇ ಕಿಷ್ಕಿಂಧೆಯ ಸೀಟ್ಗಳಲ್ಲಿ ಕುಳಿತೆವು. ಈ ಬಾರಿಯ ಪ್ರಯಾಣ ೬ ಗಂಟೆಗಳದ್ದು. ಮಡದಿಗೆ ಕಾಲು ನೋವು ಮುಖದಲ್ಲಿ ಕಾಣಿಸ ತೊಡಗಿತ್ತು. ವಿದೇಶ ಪ್ರಯಾಣದ ಕಾತುರ ಅರ್ಧ ಕಡಿಮೆಯಾಗಿತ್ತು. ಊಟ ನೀಡಲು ಬಂದ ಗಗನಸಖಿಗೆ ಮೆನು ಏನು ಎಂದು ಕೇಳಿದರೆ ಬೀಫ್ ಎಂದಳು. ನಮಗೆ ಗಾಬರಿಯಾಯಿತು. ನೋ ವೆಜ್? ಎಂದು ಕೈ ಬಾಯಿ ಮಾಡಿದೆ. ಸಾರಿ ಎಂದವಳು ಹಿಂದೂ ಮೀಲ್ ಇದೆ ಅನ್ನಿಸುತ್ತೆ ಕೊಡಲಾ ಅಂದಳು. ಕೊನೆಗೆ ಅದು ಅನ್ನ ಚಿಕನ್ ಆಗಿತ್ತು. ನಮಗೂ ಅದು ಓಕೆ.

ಬರ್ನ್  ನಲ್ಲಿ ನಾವು ಇಳಿದಾಗ ನಮಗಾಗಿ ಕಾಯುತ್ತಿದ್ದ   ಒಂಬತ್ತು ಆಸನಗಳ ವ್ಯಾನ್ ನಲ್ಲಿ ನಾವು ತಲುಪಬೇಕಿದ್ದ ಕಾಫ್ಬರ್ನ್ ಎಂಬ ಪುಟ್ಟ ಪಟ್ಟಣದ ಕಡೆಗೆ ಪಯಣಿಸಿದೆವು. ಅಲ್ಲಿ Irsreer  ಎಂಬ ರೆಸಾರ್ಟ್ ನಲ್ಲಿ ನಮಗೆ ವಾಸ್ತವ್ಯದ ಏರ್ಪಾಟು ಆಗಿತ್ತು. ಹೈವೇಯ ಇಕ್ಕೆಲಗಳಲ್ಲಿ ಕಂಡು ಬರುತ್ತಿದ್ದ mustard fields, ಸಾಸಿವೆ ಗಿಡದ ಹೊಲಗಳು ತಮ್ಮ ಹಳದಿ ಹೂವಿನ ಹಾಸಿಗೆಯನ್ನು ನೆಲಕ್ಕೆ ಹೊದಿಸಿ ನಯನ ಮನೋಹರವಾಗಿ ಕಾಣುತ್ತಿದ್ದವು. ಕಣ್ಣಅಳತೆಯಲ್ಲಿ  ಕಾಣುತ್ತಿದ್ದ ಆಲ್ಫ್ ಪರ್ವತಗಳು ತಮ್ಮ ಹಿಮಾಚ್ಚಾದಿತ ಶಿಖರ ಗಳನ್ನು ಆಗಸದಲ್ಲಿಯ ಬಿಳಿಯಮೋಡಗಳ ಜೊತೆಗೆ ಮೇಳೈಸಿ ಸ್ಪರ್ಧೆಗೆ ನಿಂತಿರುವಂತೆ ಕಾಣುತ್ತಿದ್ದವು. ಎಲ್ಲೂ ನಮಗೆ ಗಡಿಬಿಡಿ ಕಾಣಲಿಲ್ಲ. ಖಾಲಿ ಖಾಲಿ ರಸ್ತೆಗಳು. ಆಗೊಮ್ಮೆ ಈಗೊಮ್ಮೆ ಭರ್ ಎಂದು ವೇಗವಾಗಿ ಸರಿದು ಹೋಗುವ ವಾಹನಗಳು. ಎರಡು ಗಂಟೆ ಪಯಣ ಮುಗಿದಿದ್ದು ಗೊತ್ತಾಗಲಿಲ್ಲ.

Irseer  ಹೋಟೆಲ್ ನಲ್ಲಿ ಚೆಕ್ ಇನ್ ಆದೇವು. ಇದು ಮೊದಲು brewery ಫ್ಯಾಕ್ಟರಿ ಆಗಿತ್ತಂತೆ. ಈಗ ಅದನ್ನು ರೆಸಾರ್ಟ್ ಆಗಿ ಬದಲಾಯಿಸಿದ್ದಾರೆ. 

ಕಾಫ್ ಬರ್ನ ಬವೇರಿಯಾ ದ ಸ್ವೇಬಿಯಾ ಜಿಲ್ಲೆಯಲ್ಲಿ ಬರುವ ಪುಟ್ಟ ಪಟ್ಟಣ.

ಮಾರನೇ ದಿನ ನಾವೆಲ್ಲ ಆಸ್ಟ್ರಿಯಾ ದಲ್ಲಿ ಇರುವ ಸಾಲ್ಸ್ ಬರ್ಗ್ ಗೆ ಭೇಟಿ ನೀಡುವ ಕಾರ್ಯಕ್ರಮ ವಿತ್ತು. 250 ಕಿ.ಮಿ.ಯ ರಸ್ತೆ ಪಯಣ. ದಾರಿಯಲ್ಲಿ ಒಂದು ಸರೋವರವನ್ನು ನೋಡಿದೆವು. Lake Cheimse ಎಂದು ಹೆಸರು. ಬೋಟಿಂಗ್ ನಡೆಸುತ್ತಿದ್ದರು. ಸುಂದರವಾದ ಲೇಕ್. ಪುಟ್ಟದಾದ ಒಂದು ಕಟ್ಟಡ ತೋರಿಸಿ ನಮ್ಮ ಸ್ನೇಹಿತರು ಹೇಳಿದರು. ಇದೋ ನೋಡಿ fossil watch factory. ಈ ಸಣ್ಣ building ನಲ್ಲಿ ಇವರು ಇಡೀ ಪ್ರಪಂಚದ ತುಂಬಾ ವಹಿವಾಟು ನಡೆಸುತ್ತಾರೆ ಅಂದರು. ನಾವು ಗಮನಿಸಿದಂತೆ ಇಲ್ಲಿ ಪ್ರತಿ ಕಟ್ಟಡಕ್ಕೂ ಸೋಲಾರ್ ಪ್ಯಾನಲ್ ಗಳನ್ನೂ ಅಳವಡಿಸಲಾಗಿತ್ತು ಮತ್ತು ಎಲ್ಲವೂ ಮಳೆ ನೀರು ಸಂಗ್ರಹಕ್ಕೆ ಪೈಪ್ ಗಳನ್ನು ಹೊಂದಿದ್ದವು. ವರ್ಷ ಪೂರ್ತಿ ಮಳೆ ಸುರಿಯುವ ಈ ದೇಶಗಳಲ್ಲೂ ನೀರು ಸಂರಕ್ಷಣೆಗೆ ಅವರು ನೀಡುವ ಆದ್ಯತೆ ಮೆಚ್ಚಬೇಕು.

ದಾರಿಯಲ್ಲಿ ಪೆಟ್ರೋಲ್ ಸ್ಟೇಷನ್ ಮತ್ತು ಡಿಪಾರ್ಟ್ಮೆಂಟ್ ಸ್ಟೋರ್ಸ್ ಇದ್ದ ಜಾಗದಲ್ಲಿ ನಿಲ್ಲಿಸಿದರು. ಎಲ್ಲರಿಗೂ ರೆಸ್ಟ್ ರೂಮ್ ಗೆ ಹೋಗುವ ಆತುರ. ಆದರೆ ಅಲ್ಲಿ ಹೋಗಲು 70 ಸೆಂಟ್ಸ್ ಪಾವತಿಸಬೇಕು. ಒಂದು ಮೆಷಿನ್ ನಲ್ಲಿ ಕಾಯಿನ್ ಹಾಕಿದರೆ ಗೇಟ್ ಓಪನ್ ಆಗುತ್ತೆ. ನಮ್ಮಲ್ಲಿ ಚಿಲ್ಲರೆ ಇರಲಿಲ್ಲ. ಅಲ್ಲಿ ಕೌಂಟರ್ ನಲ್ಲಿ ಕೇಳಿದಿವಿ. ಅವನು ಚೇಂಜರ್ ಮೆಷಿನ್ ನಲ್ಲಿ ಚಿಲ್ಲರೆ ತಗೊಳಿ ಅಂತ ಕೈ ಮಾಡಿದ. ಅಲ್ಲಿಗೆ ಓಡಿ ಹೋದ್ವಿ. ಅದು 5 ಯುರೋ ನೋಟ್ ಗಳನ್ನ ಮಾತ್ರ ಕೇಳ್ತಾ ಇತ್ತು. ನಮ್ಮ ಹತ್ರ 50 ಯುರೋ ನೋಟ್ ಗಳು ಮಾತ್ರ ಇದ್ದವು. ಮತ್ತೆ ಕೌಂಟರ್ ಹತ್ರ ಓಡಿ ಹೋದ್ವಿ. ಅವನು 5ರ ನೋಟ್ ಕೊಟ್ಟ. ಮೆಷಿನ್ ಗೆ ಹಾಕಿದಾಗ ಅದು ಹೇಳಿತು          “Ausser betrieb” (out of order) ! 

ಕೊನೆಗೆ ಆ ಕೌಂಟರ್ ಮನುಷ್ಯನಿಗೆ ಕರುಣೆ ಬಂದು ಎಲ್ಲರಿಗೂ ಚಿಲ್ಲರೆ ಕೊಟ್ಟ. ಅಂತೂ ಇಂತೂ ಕಟ್ಟಿಕೊಂಡ ನೀರು ವಿಸರ್ಜಿಸುವ ಹೊತ್ತಿಗೆ ಸಾಕಾಗಿ ಹೋಯಿತು. 

ಆಸ್ಟ್ರಿಯಾ ದ ಎಂಟ್ರಿ ಪಾಯಿಂಟ್ ಗೆ ಬಂದೆವು. ಅಲ್ಲಿ ಕಸ್ಟಮ್ ಆಫೀಸ್ ಇದ್ದು ಎರಡು ದೇಶಗಳ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಮ್ಮ ವಾಹನಕ್ಕೆ ಅಸ್ತ್ರೀಯನ್ ಪಾಸ್ ಇತ್ತು. ಅಲ್ಲಿ ಎಲ್ಲವೂ ಫಾಸ್ಟ್ ಟ್ಯಾಗ್. 

ಸಾಲ್ಸ್ ಬರ್ಗ್ ಅನ್ನು ತಲುಪಿದಾಗ 11.30 ಆಗಿತ್ತು. ಇದು ಪ್ರಸಿದ್ಧ ಸಂಗೀತಕಾರ ಮೊಜಾರ್ಟ್ ನ ಊರು. ನಾವು ಮೊದಲು ಅಲ್ಲಿಯ ಫೇಮಸ್ ಚರ್ಚ್ Dom zu Salizburg ಗೆ ಭೇಟಿ ಕೊಟ್ಟೆವು. ಅದುಬೆಟ್ಟದ ಮೇಲೆ ಇದ್ದು ಕೇಬಲ್ ಕಾರ್ ನಲ್ಲಿ ಹೋಗಬೇಕು. ಸಂತ ರೂಪರ್ಟ್ ಮತ್ತು ಸಂತ ವರ್ಜಿಲ್ ರವರ ನೆನಪಿಗೆ ಮೀಸಲಿಟ್ಟ ಇಲ್ಲಿಯ ಕೋಟೆ ಯನ್ನು ಮೊದಲಿಗೆ ಕ್ರಿ.ಶ. 774 ರಲ್ಲಿ ಮೊದಲು ಕಟ್ಟಿದ್ದರು. ಬೆಂಕಿಗೆ ಸಿಕ್ಕಿ ನಾಶವಾದ ಕಟ್ಟಡವನ್ನು 1628 ರಲ್ಲಿ ಮತ್ತೆ ಪುನರ್ ನಿರ್ಮಿಸಲಾಯಿತು. ಎರಡನೇ ಮಹಾಯುದ್ಧದಲ್ಲಿ ಮತ್ತೆ ಜಖಂಗೊಂಡ ಇದನ್ನಯೂ 1959 ರಲ್ಲಿ ಪುನಃ ಕಟ್ಟಿದರು.

ಮೇಲೆ ಒಂದು ಓಪನ್ ರೆಸ್ಟೋರೆಂಟ್ ಇದೆ. ಅಲ್ಲಿಂದ ಸುತ್ತಲ ದೃಶ್ಯ ರಮಣೀಯವಾಗಿ ಕಾಣುತ್ತದೆ. ಇಲ್ಲಿ ಎಲ್ಲ ಕೋಟೆಗಳು, ಚರ್ಚ್ ಗಳಲ್ಲಿ ಪೋಪ್ ಗಳ ಅಧಿಕಾರವೇ ಹೆಚ್ಚು ಕಾಣುತ್ತಿತ್ತು. ನಂತರದ ಕಾಲದಲ್ಲಿ ರಾಜರುಗಳು ಈ ಪೋಪ್ ಮತ್ತು ಬಿಷಪ್ ಗಳ ಅಧಿಕಾರವನ್ನು ಕಿತ್ತುಕೊಂಡು ತಮ್ಮ ಪಾರಮ್ಯವನ್ನು ಸ್ಥಾಪಿಸಿದರು. ನಮ್ಮಲ್ಲಿ ಆದ ಹಾಗೆ ರಾಜರುಗಳು ಇಲ್ಲಿ ಮರುಳಾಗಲಿಲ್ಲ.

ಇಲ್ಲೆಲ್ಲೂ ನಮಗೆ ಒಬ್ಬ ಇಂಡಿಯನ್ ಟೂರಿಸ್ಟ್ ಕಣ್ಣಿಗೆ ಬೀಳಲಿಲ್ಲ. ಕೆಳಗೆ ಇಳಿಯುವಾಗ ಬವರಿಯಾನ್ ಡ್ರೆಸ್ ನಲ್ಲಿ ಹೆಣ್ಣು ಮಕ್ಕಳು ಫೋಟೋ ತೆಗೆಸಿಕೊಂಡರು. ಅಲ್ಲಿಯಫೋಟೋಗ್ರಾಫರ್ ನಿಜಕ್ಕೂಪಾದರಸದಂತೆಓಡಾಡುತ್ತಿದ್ದಳು.ಮಕ್ಕಳಿಗೆ ಅವಳು ನಿಮಿಷಾರ್ಧದಲ್ಲಿ ಬವೇರಿಯನ್ ಗಳಂತೆ ಬದಲಾಯಿಸಿಬಿಟ್ಟಳು. ಪೋಸ್   ಕೊಡಲು ಅವಳು ಹೇಳುತ್ತಿದ್ದ ರೀತಿ ಮತ್ತು ಚಕ ಚಕ ನೆಂದು ಕ್ಯಾಮೆರಾ ಕ್ಲಿಕ್ ಮಾಡುತ್ತಿದ್ದ ರೀತಿ ಬೆರಗು ಹುಟ್ಟಿಸುತ್ತಿತ್ತು. ಊಟದ ಸಮಯವಾಗಿದ್ದು ಮರೆತು ಹೋಗಿತ್ತು. ಅದೂ ಅಲ್ಲದೆ ಹೆಣ್ಣು ಮಕ್ಕಳು ಡ್ರೆಸ್ ಮಾಡಲು ಶುರು ಮಾಡಿದಾಗ ತಡೆಯುವ ಧೈರ್ಯ ಮಾಡಿದವರುಂಟೆ. ಆದರೂ ನಿಜವಾಗಿಯೂ ಅವರೆಲ್ಲ ಆ ಕಾಲದ ರಾಣಿಯರ ತರವೇ ಕಾಣುತ್ತಿದ್ದರು. ಮಧ್ಯಾಹ್ನ 3 ಗಂಟೆಯಾಗಿತ್ತು. ಹೊಟ್ಟೆ ಚುರುಗುಡುತ್ತಿತ್ತು. ಅಲ್ಲಿ ಸಿಕ್ಕಿದ್ದೆಲ್ಲ ತಿಂದು ಬಿಟ್ಟೆವು. ಬ್ರಾಕೋಲಿ.. ಕ್ಯಾಬೇಜ್..ಸೂಪ್..ಕಾಪ್ರಿಸಿ.. ಲ್ಯಾಂಬ್ ಮೀಟ್ ಡೀಪ್ ಫ್ರಯೆಡ್ ವಿಥ್ ವೀಟ್, ಚಿಕೆನ್ ನಗ್ಗೆಟ್ಸ್…ಬ್ಲಾ ಬ್ಲಾ 

ಅಲ್ಲಿಂದ ನಾವು ಲಾಕ್ ಬ್ರಿಡ್ಜ್ ನೋಡಿದೆವು. ತಾವು ಇಷ್ಟ ಪಟ್ಟಿದ್ದು ಪಡೆಯಲು ಅಥವಾ ಬೇಡವೆಂದಿದ್ದು ಬಿಡಲು ವಿಶ್ ಮಾಡಿ ಸೇತುವೆಯ ಪಾರ್ಶ್ವದಲ್ಲಿಯ ಚೈನ್ ಫೆನ್ಸ್ ಗೆ ಬೀಗ ಜಡಿದು ಕೀ ಅನ್ನು ನದಿಗೆ ಎಸೆಯಬೇಕು. ಈ ಸೇತುವೆಯನ್ನು Makartsteg bridge ಎಂದು ಕರೆಯುತ್ತಾರೆ. Salzac ನದಿಗೆ ಅಡ್ಡಲಾಗಿ ಕಟ್ಟಿದೆ. 

ನಾವು ಕಾಫ್ ಬೆರ್ನ್ ಗೆ ವಾಪಸ್ ಬಂದೆವು. ದಾರಿಯಲ್ಲಿ ಒಂದು turkish ಹೋಟೆಲ್ ನಲ್ಲಿ ಬಾತುಕೋಳಿಯ ಬಿರಿಯಾನಿ ಕಟ್ಟಿಸಿಕೊಂಡೆವು. ರೂಮ್ ಸೇರಿದಾಗ 11 ಗಂಟೆ. ಚಳಿ. ನಿದ್ದೆ ಹತ್ತಿತು.

ನಾಳೆ ವಿಶಿಷ್ಠವಾದ ಕೋಟೆಯೊಂದಕ್ಕೆ ಭೇಟಿ ನೀಡಲಿದ್ದೇವೆ. Neuschwanstein castle ! ಅದೊಂದು ಇಂಜಿನೀಯರಿಂಗ್ ಅದ್ಭುತ ಮತ್ತು ನಯನ ಮನೋಹರ ತಾಣ.

ಮುಂದುವರಿಯುವುದು…

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: